ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ; 3.47 ಕೋಟಿ ಜಪ್ತಿ ಮಾಡಿದ ಸಿಸಿಬಿ!
ಬೆಂಗಳೂರು; ಕಳೆದ ರಾತ್ರಿ ಸಿಸಿಬಿ ಪೊಲೀಸರು ಬೆಂಗಳೂರಿನ ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಾಖಲೆಗಳಿಲ್ಲದೆ ಇಟ್ಟುಕೊಂಡಿದ್ದ ಸುಮಾರು 3.47 ಕೋಟಿ ರೂಪಾಯಿ ಮೊತ್ತದ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಕ್ಕಿಂಗ್ ಕೌಂಟರ್‌ನವರು ಜಿಎಸ್‌ಟಿ ಸರಿಯಾಗಿ ಕಟ್ಟದೆ ವಂಚನೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಟಿಕೆಟ್ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮಧ್ಯರಾತ್ರಿ 1ಗಂಟೆ ಸುಮಾರಿಗೆ ದಾಳಿ ನಡೆಸಿ, ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 60 ಮಂದಿಯನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಅವರಿಗೆಲ್ಲಾ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿದೆ.
ದಾಳಿ ವೇಳೆ ಪತ್ತೆಯಾದ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ದಾಖಲೆ ಒದಗಿಸದಿದ್ದರೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತ ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.