ಮತದಾರರ ಮಾಹಿತಿ ಕಳವು; ಮೋದಿ ಸರ್ಕಾರವೂ ಭಾಗಿ – ಸುರ್ಜೇವಾಲಾ
ಬೆಂಗಳೂರು; ಮತದಾರರ ಮಾಹಿತಿ ಕಳವು ಹಗರಣ ಈಗ ಜನರ ಮುಂದಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರವಲ್ಲ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ. ವರ್ತೂರಿನಲ್ಲಿ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಕೇವಲ ಮತದಾರರ ಮಾಹಿತಿ ಕಳವು ಮಾತ್ರವಲ್ಲ, ದೇಶ ಹಾಗೂ ರಾಜ್ಯದ ಹಣ ಲೂಟಿ ಮಾಡುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಸಿಟಿಜನ್ ಸರ್ವೀಸಸ್ ಸೆಂಟರ್ ನಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರಿಗೂ ಹಣ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಬೊಮ್ಮಾಯಿ ಅವರ ಜತೆಗೆ ರವಿಕುಮಾರ್ ಅವರು ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ? ಈ ಹಣ ಪಡೆದವರು ಯಾರು..? ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು ಎಂದು ಸುರ್ಜೇವಾಲಾ ಆಗ್ರಹ ಮಾಡಿದರು.
ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಈ ವಿಚಾರವಾಗಿ ಜನರು ಹಾಗೂ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ ಎಂದರು.