Bengaluru

ಲೋಕಾಯುಕ್ತರಾಗಿ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕದ ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್‌ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನೂತನ ಲೋಕಾಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್‌ ಅವರು ಕನ್ನಡ ಭಾಷೆಯಲ್ಲಿ, ಭಗವಂತ ಮತ್ತು ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಲೋಕಾಯುಕ್ತರಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು.

ಲೋಕಾಯುಕ್ತರಾಗಿ ನೇಮಕವಾಗುವ ಮುನ್ನ ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್‌ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಹಾಗೂ ಕರ್ನಾಟಕ ಲೋಕಾಯುಕ್ತದಲ್ಲಿ ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ವಸತಿ ಸಚಿವ ವಿ ಸೋಮಣ್ಣ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಶಾಸಕರಾದ ಬಸವರಾಜ ಪಾಟೀಲ್‌ ಯತ್ನಾಳ್‌, ಪಿ. ರಾಜೀವ್‌, ಕೆ. ಜೆ. ಜಾರ್ಜ್‌, ಎಂ. ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಮತ್ತು ಪಿ. ವಿಶ್ವನಾಥ್‌ ಶೆಟ್ಟಿ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Share Post