Bengaluru

40 ಪರ್ಸೆಂಟ್‌ ಕಮೀಷನ್‌ ಪಡೆದಿರುವುದಕ್ಕೆ ದಾಖಲೆ ಕೊಡಿ ಎಂದ ಕೇಂದ್ರ ಗೃಹ ಇಲಾಖೆ

ಬೆಂಗಳೂರು; ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ನಂತರ ರಾಜ್ಯದಲ್ಲಿ ನಲವತ್ತು ಪರ್ಸೆಂಟ್‌ ಕಮೀಷನ್‌ ವಿಚಾರ ದೊಡ್ಡ ಸುದ್ದಿಯಾಗಿತ್ತು. ಹಲವು ಗುತ್ತಿಗೆದಾರರು ಹೌದು, ನಲವತ್ತು ಪರ್ಸೆಂಟ್‌ ಕಮೀಷನ್‌ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡಾ ಇದೇ ರೀತಿಯ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಈ ಆರೋಪ ಸಂಬಂಧ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ. ಕಳೆದ ಶುಕ್ರವಾರ ಕೇಂದ್ರ ಗೃಹ ಇಲಾಖೆಯಿಂದ ಕೆಂಪಣ್ಣಗೆ ಫೋನ್‌ ಕರೆ ಬಂದಿದ್ದು, ಬೆಂಗಳೂರಿನ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಕೋರಲಾಗಿದೆ. 

ಕೆಂಪಣ್ಣ ರಾಜ್ಯದಲ್ಲಿನ ಪ್ರಮುಖ ಇಲಾಖೆಗಳಲ್ಲಿನ 40 ಪರ್ಸೆಂಟ್ ಕಮಿಷನ್ ಅವ್ಯವಹಾರದ ಬಗ್ಗೆ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈ 40 ಪರ್ಸೆಂಟ್ ಕಮಿಷನ್ ಆರೋಪ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದವು. ಈ ಆರೋಪ ಕೇಂದ್ರ ಸರ್ಕಾರಕ್ಕೂ ಸಾಕಷ್ಟು ಮುಜುಗರ ತಂದೊಡ್ಡಿತ್ತು.  ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಈ ಸಂಬಂಧ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

Share Post