ಏಳು ವರ್ಷದ ಮೊದಲೇ ಕ್ಯಾನ್ಸರ್ ಬರುವುದನ್ನು ಪತ್ತೆ ಹಚ್ಚಬಹುದಂತೆ!
ಬೆಂಗಳೂರು; ಕ್ಯಾನ್ಸರ್.. ಇದು ಜಗತ್ತನ್ನು ಕಾಡುತ್ತಿರುವ ಮಹಾಮಾರಿ.. ಕ್ಯಾನ್ಸರ್ ಕಾಯಿಲೆ ನಮ್ಮ ದೇಹವನ್ನು ಹೊಕ್ಕರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾನೇ ಕಷ್ಟ.. ಬಹುತೇಕರು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ.. ಒಂದು ವೇಳೆ ಕ್ಯಾನ್ಸರ್ ಗೆದ್ದು ಬಂದರೆ ಹೊಸ ಜನ್ಮ ಪಡೆದಂತೆಯೇ ಲೆಕ್ಕ.. ಹೀಗಾಗಿ, ಕ್ಯಾನ್ಸರ್ ಬಗ್ಗೆ ಎಲ್ಲರಲ್ಲೂ ಭೀತಿ ಇದೆ.. ಕ್ಯಾನ್ಸರ್ ಬಂದರೆ ಸಾಯುತ್ತಾರೆ ಎಂಬ ಆತಂಕವಿದೆ.. ಆದ್ರೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ.. ಕ್ಯಾನ್ಸರ್ ಬರುವುದನ್ನು ಮೊದಲೇ ಗುರುತಿಸಿ, ಅದನ್ನು ಬರದಂತೆ ತಡೆಯುವ ಕೆಲಸಗಳೂ ನಡೆಯುತ್ತಿವೆ.. ಕ್ಯಾನ್ಸರ್ ಬರುವ ಮೊದಲೇ ಅದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಸಂಶೋಧಕರು ನಿರತರಾಗಿದ್ದಾರೆ..
ಬ್ರಿಟನ್ನ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಹಲವು ವಿಷಯಗಳನ್ನು ತಿಳಿದುಕೊಂಡಿದ್ದಾರೆ..ಬ್ರಿಟಿಷ್ ಜರ್ನಲ್ ನೇಚರ್ ಕಮ್ಯುನಿಕೇಷನ್ಸ್ನಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ, 19 ರೀತಿಯ ಕ್ಯಾನ್ಸರ್ ಅನ್ನು ಕೇವಲ ಒಂದು ಸಣ್ಣ ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದಂತೆ. ಇದಲ್ಲದೆ, ರಕ್ತ ಪರೀಕ್ಷೆಯ ಮೂಲಕ ಕ್ಯಾನ್ಸರ್ ಬರುವ 7 ವರ್ಷಗಳ ಮೊದಲೇ ಕ್ಯಾನ್ಸರ್ ಅನ್ನು ಕಂಡುಹಿಡಿಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಬ್ರಿಟನ್ನ ಸುಮಾರು 44 ಸಾವಿರ ಜನರನ್ನು ಗರುತಿಸಿ ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಯಿತು. ಅವರಲ್ಲಿ 4900 ಮಂದಿಗೆ ಕ್ಯಾನ್ಸರ್ ಬಂದಿರುವುದು ಗೊತ್ತಾಗಿದೆ. 1,463 ಜನರ ರಕ್ತದಲ್ಲಿ ಪ್ರೋಟೀನ್ಗಳಿದ್ದವು.. ಇದರಲ್ಲಿ 618 ವಿಧದ ಪ್ರೋಟೀನ್ಗಳು 19 ರೀತಿಯ ಕ್ಯಾನ್ಸರ್ಗೆ ಸಂಬಂಧಿಸಿರುವುದು ಎಂದು ತಿಳಿದುಬಂದಿದೆ.. ಇದರಲ್ಲಿ ಕೊಲೊನ್, ಶ್ವಾಸಕೋಶ, ಹಾಡ್ಗ್ಕಿನ್ ಅಲ್ಲದ ಲಿಂಫೋಮಾ, ಯಕೃತ್ತಿನ ಕ್ಯಾನ್ಸರ್ ಸೇರಿವೆ.
ಈ ಪರೀಕ್ಷೆಯು ಕ್ಯಾನ್ಸರ್ ನ ಆರಂಭಿಕ ಹಂತವನ್ನು ಪತ್ತೆಹಚ್ಚಲು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕ್ಯಾನ್ಸರ್ ಸಾವುಗಳನ್ನು ಕಡಿಮೆ ಮಾಡಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಯುಕೆಯಲ್ಲಿನ ಸಂಶೋಧನೆ ಮತ್ತು ಆವಿಷ್ಕಾರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಇಯಾನ್ ಫೌಲ್ಕ್ಸ್ ಪ್ರಕಾರ, ಕ್ಯಾನ್ಸರ್ ಅನ್ನು ಆದಷ್ಟು ಬೇಗ ಪತ್ತೆಹಚ್ಚುವುದು ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.