Politics

ಕೋಮುಭಾವನೆ ಕೆರಳಿಸಲು ಕಾಂಗ್ರೆಸ್ಸಿಗರಿಂದ ಸಿಎಎ ಬಳಕೆ; ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌

ಬೆಂಗಳೂರು; ಮಾನವೀಯತೆ ಇಲ್ಲದ ಕಾಂಗ್ರೆಸ್‌ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ. ಪೌರತ್ವ ಕೊಡಬೇಕೆ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎನ್ನುವ ಸಾಮಾನ್ಯ ಜ್ಞಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಇದನ್ನೂ ಓದಿ; ಸಂಜೆ ವೇಳೆಗೆ ಬಿಜೆಪಿ 2ನೇ ಪಟ್ಟಿ ರಿಲೀಸ್‌?; ರಾಜ್ಯದಲ್ಲಿ ಇವರಿಗೇ ನೋಡಿ ಟಿಕೆಟ್‌..!

ಕೋಮು ಭಾವನೆ ಕೆರಳಿಸಲು ಮುಂದಾದ ಕಾಂಗ್ರೆಸ್‌;

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಬೇರೆ ದೇಶಗಳಿಂದ ಬಂದ ಅಲ್ಪಸಂಖ್ಯಾತರು ಪಾದಚಾರಿ ಮಾರ್ಗದಲ್ಲಿ ಬದುಕುತ್ತಿದ್ದು, ಆಶ್ರಯ ಕಳೆದುಕೊಂಡಿದ್ದಾರೆ. ಮಾನವೀಯತೆ ಇಲ್ಲದ ಕಾಂಗ್ರೆಸ್ಸಿಗರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ಪೌರತ್ವ ಕೊಡಬೇಕೆ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಸಾಮಾನ್ಯ ಜ್ಞಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಲ್ಲ ಎಂದರು.

ದುರಾಡಳಿತದಿಂದಾಗಿ ನೀರಿನ ಸಮಸ್ಯೆ;

ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಈ ಸಣ್ಣ ಸಮಸ್ಯೆಯನ್ನು ಪರಿಹರಿಸಲು ಕೂಡ ಸರ್ಕಾರಕ್ಕೆ ಯೋಗ್ಯತೆಯಿಲ್ಲ. ಕಾವೇರಿ ಟ್ರಿಬ್ಯುನಲ್‌ನಲ್ಲಿ ಸರಿಯಾಗಿ ವಾದಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡಿನ ಆತ್ಮೀಯ ಸ್ನೇಹಿತರಾದ ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಟಿಕೆಟ್‌ಗಾಗಿ ಕಾವೇರಿಯನ್ನು ನೀಡಿದ್ದಾರೆ. ಬೆಂಗಳೂರು, ಮಂಡ್ಯದಲ್ಲಿ ನೀರಿನ ಕೊರತೆಗೆ ಕಾಂಗ್ರೆಸ್ಸೇ ನೇರ ಕಾರಣ. ಜನರು ವಲಸೆ ಹೋಗಲು, ಬೀದಿಗೆ ಬರಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಅಪಕೀರ್ತಿ ತರಲು ಕಾಂಗ್ರೆಸ್‌ ಸರ್ಕಾರವೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಜನರು ಈ ದುರಾಡಳಿತಕ್ಕೆ ತಿಲಾಂಜಲಿ ನೀಡಬೇಕು ಎಂದರು.

ಇದನ್ನೂ ಓದಿ; ನಾಳೆಯೇ ಬಿಜೆಪಿ ಸೇರಲಿದ್ದಾರೆ ದೇವೇಗೌಡರ ಅಳಿಯ; ಬೆಂಗಳೂರು ಗ್ರಾ.ಕ್ಕೆ ಡಾ.ಸಿ.ಎನ್‌.ಮಂಜುನಾಥ್‌ ಗೆ ಟಿಕೆಟ್‌ ಕನ್ಫರ್ಮ್‌!

ಎಲ್ಲಾ ಕ್ಷೇತ್ರದಲ್ಲೂ ಗೆಲುವು ನಮ್ಮದೇ;

ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದು ಎಂಬಂತೆ ಬಿಂಬಿಸಿಕೊಳ್ಳುವಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಗೆಟ್ಟಿದ್ದಾರೆ. ಕೇಂದ್ರದಿಂದ ಅನುದಾನ ಸಿಗುವ ಯೋಜನೆಗಳ ಜಾಹೀರಾತಿಗೆ ಪ್ರಧಾನಿಯವರ ಚಿತ್ರವನ್ನೂ ಹಾಕಬೇಕು ಎಂದು ಆಗ್ರಹಿಸಿದರು. ಎರಡು ಬಾರಿ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಟಿಕೆಟ್‌ ನಿರ್ಧಾರ ಅಂತಿಮಗೊಳ್ಳುತ್ತಿದೆ. ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಹಳೆ ಬೇರು ಹೊಸ ಚಿಗುರು ಎನ್ನುವುದು ಬಿಜೆಪಿಯ ಧರ್ಮ. ಟಿಕೆಟ್‌ ಸಿಗುವುದಿಲ್ಲವೆಂದು ಯಾರೂ ಊಹೆ ಮಾಡಿಕೊಂಡು ಮಾತನಾಡುವುದು ಬೇಡ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಟಿಕೆಟ್‌ ನೀಡಲಾಗುತ್ತಿದೆ. ಹೃದಯರೋಗ ತಜ್ಞರಾದ ಡಾ.ಸಿ.ಎನ್‌.ಮಂಜುನಾಥ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಮಟ್ಟದಲ್ಲೂ ಚರ್ಚೆಯಾಗಿದೆ ಎಂದರು.

ಬಿಜೆಪಿಯಲ್ಲಿ ಹೆಚ್ಚು ಪ್ರಜಾಪ್ರಭುತ್ವವಿದ್ದು, ಇಲ್ಲಿ ಯಾರೂ ಬಂಡಾಯವೇಳುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಮುಂದೆ ಯಾವುದೂ ನಡೆಯುವುದಿಲ್ಲ. ಮ್ಯಾಚ್‌ ಆಡುವ ಮುನ್ನ ಕ್ಯಾಪ್ಟನ್‌ ಇರಬೇಕು. ಯುದ್ಧ ಮಾಡಲು ಕೂಡ ಸೇನಾಧಿಪತಿ ಬೇಕು. ಅದು ಯಾರೆಂದು ನಿರ್ಧರಿಸುವ ಯೋಗ್ಯತೆ ಕಾಂಗ್ರೆಸ್‌ಗಿಲ್ಲ. INDI ಅಲಯನ್ಸ್‌ನಲ್ಲಿ ಈಗ ದೊಡ್ಡ ನಾಯಕರಾರೂ ಇಲ್ಲ. ಎಕ್ಸ್ಟ್ರಾ ಪ್ಲೇಯರ್‌ಗಳು ಮಾತ್ರವಿದ್ದು, ಅವರನ್ನಿಟ್ಟುಕೊಂಡು ಮ್ಯಾಚ್‌ ಆಡಿದರೆ ಗೆಲ್ಲಲು ಸಾಧ್ಯವೇ ಎಂದು ಯೋಚಿಸಲಿ ಎಂದರು.

ಇದನ್ನೂ ಓದಿ; ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್‌ ಹಿಡಿಯೋದು ಈಗ ಸುಲಭ!

Share Post