ಜನವರಿ 20ರ ನಂತರ ಜಾತಿ ಗಣತಿ ವರದಿ ಸಲ್ಲಿಕೆ..?; ಬಿಡುಗಡೆಯಾಗುತ್ತಾ ವರದಿ..?
ಬೆಂಗಳೂರು; ಜಾತಿ ಗಣತಿ ವರದಿಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ರಾಜ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದೇ ತಿಂಗಳ 20ರ ನಂತರ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡುತ್ತೆ ಎಂದು ಹೇಳಲಾಗುತ್ತಿದೆ.
ಜನವರಿ 30ಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರವಾಧಿ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ಅವಧಿ ಮುಗಿಯುವುದರೊಳಗೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಜಯಪ್ರಕಾಶ್ ಹೆಗ್ಡೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂತರಾಜು ವರದಿ ಬದಲು ಬೇರೆ ಹೆಸರಿನಲ್ಲಿ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಂದು ಕಡೆ ಒಕ್ಕಲಿಗರು ಹಾಗೂ ಲಿಂಗಾಯತರು ಜಾತಿ ಗಣತಿಯನ್ನು ವಿರೋಧ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಜಾತಿಗಣತಿ ರಿಲೀಸ್ ಮಾಡುವಂತೆ ಒತ್ತಡ ಹೇರುತ್ತಿವೆ. ಹೀಗಾಗಿ ಸರ್ಕಾರ, ವರದಿ ಬಿಡುಗಡೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಸಂದಿಗ್ದತೆಯಲ್ಲಿ ಸರ್ಕಾರ ಸಿಲುಕಿದೆ.
ಇದೇ ಜನವರಿ ತಿಂಗಳಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ ಈ ಸಮಾವೇಶಕ್ಕೂ ಮೊದಲು ವರದಿಯನ್ನು ಸರ್ಕಾರ ಸ್ವೀಕಾರ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ವರದಿ ಸ್ವೀಕಾರ ಮಾಡಿದರೂ ಅದನ್ನು ರಿಲೀಸ್ ಮಾಡೋದನ್ನು ತಡ ಮಾಡಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.