National

ಕುನೋ ಉದ್ಯಾನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

ಭೋಪಾಲ್; ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ನಮೀಬಿಯಾದ ಚೀತಾವೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಪರ್ರ್ಸ್ ಇನ್ ದಿ ವೈಲ್ಡ್! ಕುನೋ ನ್ಯಾಷನಲ್ ಪಾರ್ಕ್ ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂಬ ವಿಚಾರವನ್ನು ಹಂಚಿಕೊಳ್ಳಲು ರೋಮಾಂಚನವಾಗುತ್ತದೆ. ನಮೀಬಿಯಾದ ಚೀತಾ ಆಶಾಗೆ ಮರಿಗಳು ಜನಿಸಿವೆ” ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದುಕೊಂಡಿದ್ದಾರೆ. “ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಘರ್ಜಿಸುವ ಯಶಸ್ಸು” ಎಂದು ಅವರು ಅಭಿವೃದ್ಧಿಯನ್ನು ಬಣ್ಣಿಸಿದ್ದಾರೆ.

“ಯೋಜನೆಯಲ್ಲಿ ತೊಡಗಿರುವ ಎಲ್ಲಾ ತಜ್ಞರು, ಕುನೋ ವನ್ಯಜೀವಿ ಅಧಿಕಾರಿಗಳು ಮತ್ತು ಭಾರತದಾದ್ಯಂತ ವನ್ಯಜೀವಿ ಉತ್ಸಾಹಿಗಳಿಗೆ ನನ್ನ ದೊಡ್ಡ ಅಭಿನಂದನೆಗಳು” ಎಂದು ಯಾದವ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಮರಿಗಳ ಜನನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಏಷ್ಯಾದಿಂದ ಚೀತಾಗಳು ನಿರ್ನಾಮವಾಗಿದ್ದ ಕಾಲವೊಂದಿತ್ತು. ಈಗ ಅದು ಬದಲಾಗುತ್ತಿದೆ. ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶವು ‘ಚೀತಾ ರಾಜ್ಯ’ ಎಂಬ ಸ್ಥಾನಮಾನವನ್ನು ಗಳಿಸಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.

 

Share Post