NationalPolitics

ವಿದ್ಯುತ್‌ ವ್ಯವಹಾರಗಳ ಬಗ್ಗೆ ಶ್ವೇತಪತ್ರ ಹೊರಡಿಸುತ್ತಂತೆ ತೆಲಂಗಾಣ ಸರ್ಕಾರ; ಅಷ್ಟಕ್ಕೂ ಶ್ವೇತಪತ್ರ ಅಂದ್ರೆ ಏನು..?

ಹೈದರಾಬಾದ್‌; ನಿನ್ನೆಯಷ್ಟೇ ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಸ್ವೀಕರಿಸಿದ್ದಾರೆ. ಅವರು ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.  ಈ ಸಚಿವ ಸಂಪುಟದಲ್ಲಿ ವಿದ್ಯುತ್ ಇಲಾಖೆ ಕುರಿತ ಚರ್ಚೆಯ ವೇಳೆ ಮುಖ್ಯಮಂತ್ರಿಗಳು ವಿದ್ಯುತ್ ಇಲಾಖೆಯ ವಹಿವಾಟಿನ ಕುರಿತು ಶೀಘ್ರವೇ ಶ್ವೇತಪತ್ರ ಬಿಡುಗಡೆ ಮಾಡಬೇಕು ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ಟ್ರಾನ್ಸ್‌ಕೋ ಮತ್ತು ಜೆನ್‌ಕೋ ಸಿಎಂಡಿ ಹುದ್ದೆಗೆ ರಾಜೀನಾಮೆ ನೀಡಿದ ಡಿ. ಪ್ರಭಾಕರ್ ರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ಮತ್ತು ಶುಕ್ರವಾರದ ಪರಿಶೀಲನೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಭೆಯ ನಂತರ ಸಚಿವರಾದ ಶ್ರೀಧರ್ ಬಾಬು ಮತ್ತು ಪೊನ್ನಂ ಪ್ರಭಾಕರ್ ಅವರು,  ಸಚಿವ ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರು.

ಸಚಿವ ಶ್ರೀಧರ್ ಬಾಬು ಮಾತನಾಡಿ, ‘ಹಿಂದಿನ ಸರ್ಕಾರದ ಅವಧಿಯಲ್ಲಿ 2014ರ ಡಿ.7ರಿಂದ 2023ರ ಡಿ.7ರವರೆಗೆ ಎಲ್ಲ ಇಲಾಖೆಗಳಲ್ಲಿ ನಡೆದಿರುವ ಹಣಕಾಸು ವಹಿವಾಟಿಗೆ ಸಂಬಂಧಿಸಿದ ಖರ್ಚು–ವೆಚ್ಚಗಳು ಹಾಗೂ ಜನರಿಗೆ ಸಿಕ್ಕಿರುವ ಸವಲತ್ತುಗಳ ವಿವರ ಒಳಗೊಂಡ ಶ್ವೇತಪತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಇದರೊಂದಿಗೆ ವಿದ್ಯುತ್ ಇಲಾಖೆಯಲ್ಲಿನ ವಹಿವಾಟಿನ ಬಗ್ಗೆಯೂ ಶ್ವೇತಪತ್ರ ಬಿಡುಗಡೆ ಮಾಡಲಾಗುವುದು ಎಂದರು.

ಏನಿದು ಶ್ವೇತಪತ್ರ ಅಂದರೆ..?

ಈ ಶ್ವೇತಪತ್ರದ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕ ಸಂಘಗಳು ಕೆಲವು ವಿಷಯಗಳ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಸರ್ಕಾರಗಳನ್ನು ಒತ್ತಾಯಿಸುತ್ತಿರುವುದನ್ನು ನಾವು ನೋಡುತ್ತೇವೆ. ಹಾಗೆಯೇ ನಿರ್ದಿಷ್ಟ ವಿಷಯದ ಬಗ್ಗೆ ಸರ್ಕಾರವೇ ಶ್ವೇತಪತ್ರವನ್ನು ಬಿಡುಗಡೆ ಮಾಡುತ್ತದೆ ಕೂಡಾ. ಹಾಗಾದರೆ ಈ ಶ್ವೇತಪತ್ರ ಅಂದರೆ ಏನು..? ಇದು ಏನು ಒಳಗೊಂಡಿರುತ್ತದೆ?

ಯಾವುದೇ ವಿಷಯದ ಬಗ್ಗೆ ಸರ್ಕಾರ ನೀಡುವ ಅಧಿಕೃತ ವರದಿ ಅಥವಾ ಮಾರ್ಗದರ್ಶನದ ದಾಖಲೆಯನ್ನೇ ಶ್ವೇತಪತ್ರ ಎಂದು ಕರೆಯಲಾಗುತ್ತದೆ. ಅಂದರೆ, ಶ್ವೇತಪತ್ರವು ಒಂದು ವಿಷಯದ ಬಗ್ಗೆ ಸಂಪೂರ್ಣ ವಿವರಗಳು ಮತ್ತು ಅಧಿಕೃತ ಸರ್ಕಾರಿ ಮಾಹಿತಿಯೊಂದಿಗೆ ಸಿದ್ಧಪಡಿಸಲಾದ ವಾಸ್ತವಿಕ ವರದಿಯಾಗಿದೆ. ಇದಲ್ಲದೆ, ನಿರ್ದಿಷ್ಟ ವಿಷಯದ ಬಗ್ಗೆ ಸರ್ಕಾರಕ್ಕೆ ಅದರ ನೀತಿಗಳನ್ನು ತಿಳಿಸಲು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲು ಶ್ವೇತಪತ್ರವನ್ನು ಸಹ ಬಳಸಬಹುದು. ಅಲ್ಲದೆ, ವಿಧಾನಮಂಡಲದಲ್ಲಿ ಮಸೂದೆ ಮಂಡಿಸುವ ಮುನ್ನ ಅದರ ವಿವರಗಳನ್ನು ಶ್ವೇತಪತ್ರದ ಮೂಲಕ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ತಿಳಿಸಬಹುದು.

ಯಾವಾಗ ಇದು ಆರಂಭವಾಯಿತು?

ಶ್ವೇತಪತ್ರ ಎಂಬ ಪದವನ್ನು ಮೊದಲು ಬಳಸಿದ್ದು ಬ್ರಿಟಿಷ್ ಸರ್ಕಾರ. 1922 ರಲ್ಲಿ ಚರ್ಚಿಲ್ ಸರ್ಕಾರವು ಬಿಡುಗಡೆ ಮಾಡಿದ ವರದಿಯನ್ನು ಶ್ವೇತಪತ್ರ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ. ಬ್ರಿಟಿಷ್ ಸಂಸತ್ತಿನ ವ್ಯಾಖ್ಯಾನದ ಪ್ರಕಾರ, ‘ಸರ್ಕಾರದ ನೀತಿಗಳು, ಕಾನೂನು ಪ್ರಸ್ತಾವನೆಗಳು, ಮಸೂದೆಯ ರೂಪದ ಮೊದಲು ನಡೆಯುವ ವ್ಯವಹಾರಗಳು ಮತ್ತು ಕೆಲವೊಮ್ಮೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸರ್ಕಾರಿ ವರದಿಯನ್ನು ಶ್ವೇತಪತ್ರ ಎಂದು ಕರೆಯಲಾಗುತ್ತದೆ’.

ಏನಿದು ಹಸಿರು ಪತ್ರ..?

ಕೆಲವು ದೇಶಗಳಲ್ಲಿ ಶ್ವೇತಪತ್ರದೊಂದಿಗೆ ಹಸಿರು ಪತ್ರದ ನೀತಿಯೂ ಜಾರಿಯಲ್ಲಿದೆ. ಶ್ವೇತಪತ್ರದ ಮೊದಲು ಸರ್ಕಾರವು ವಿವಿಧ ವಿಷಯಗಳ ಕುರಿತು ಹಸಿರು ಪತ್ರವನ್ನು ಬಿಡುಗಡೆ ಮಾಡುತ್ತದೆ. ಗ್ರೀನ್ ಪೇಪರ್ ಎನ್ನುವುದು ಪ್ರಸ್ತಾವನೆಗಳು, ಚರ್ಚೆಗಳ ಸಾರಾಂಶ, ಶಿಫಾರಸುಗಳು ಮತ್ತು ಇತರ ವಿಷಯಗಳೊಂದಿಗೆ ವಿಷಯದ ಕುರಿತು ಸರ್ಕಾರ ಬಿಡುಗಡೆ ಮಾಡಿದ ನೀತಿ ವರದಿಯಾಗಿದೆ. ಶ್ವೇತಪತ್ರಗಳಿಂದಾಗಿ ಜನರು ಸರ್ಕಾರದ ನೀತಿ ನಿರ್ಧಾರಗಳು ಮತ್ತು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಸರ್ಕಾರದ ಕಾರ್ಯವೈಖರಿಯನ್ನು ಅರಿತು ಸಲಹೆಗಳನ್ನು ನೀಡಲು ಅವಕಾಶವಿದೆ.

Share Post