BengaluruCinemaCrime

ಸಮುದ್ರಂ ಸಿನಿಮಾ ತಂಡದಲ್ಲಿ ವಿವಾದ; ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ದೂರು

ಬೆಂಗಳೂರು; ಕನ್ನಡದ ಸಮುದ್ರಂ’ ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ದೂರು ದಾಖಲಿಸಲಾಗಿದೆ. ಚಿತ್ರದ ನಿರ್ಮಾಪಕಿ ರಾಜಲಕ್ಷ್ಮಿ ಎಂಬುವವರು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದು, ಚಿತ್ರದ ಹಾರ್ಡ್‌ ಡಿಸ್ಕ್‌ ಕೊಡುತ್ತಿಲ್ಲ. ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿನಿಮಾಟೋಗ್ರಾಫರ್‌ ವಿರುದ್ಧ ಆರೋಪ ಮಾಡಲಾಗಿದೆ.

ಅಂದಹಾಗೆ ಅನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ನಲ್ಲಿ ಈ ಚಿತ್ರ ಮೂಡಿಬಂದಿದೆ. ಇನ್ನು ವಿವಾದದ ಬಗ್ಗೆ ನಟಿ ಅನಿತಾ ಭಟ್‌ ಮಾತನಾಡಿದ್ದಾರೆ. ಈ ಸಿನಿಮಾವನ್ನು ಮೊದಲ ನಾನೇ ನಿರ್ಮಾಣ ಮಾಡುತ್ತಿದ್ದೆ. ಆದ್ರೆ ಹಣ ಸಾಲದೆ ಬಂದಿದ್ದರಿಂದ ಮತ್ತೊಬ್ಬರಿಗಾಗಿ ಹುಡುಕಾಟ ನಡೆಸಿದ್ದೆವು. ಈ ವೇಳೆ ಬಂದ ರಾಜಲಕ್ಷ್ಮಿಯವರು ಪೂರ್ತಿ ಸಿನಿಮಾ ನಾನೇ ಮಾಡುತ್ತೇನೆ ಎಂದರು. ಹೀಗಾಗಿ ಈಗಾಗಲೇ ಖರ್ಚು ಮಾಡಿದ್ದ ಹಣವನ್ನು ನಮಗೆ ಕೊಡಬೇಕೆಂದು ಕೇಳಿದೆವು. ಅದಕ್ಕೆ ಅವರು ಒಪ್ಪಿದ್ದರು. ಆದ್ರೆ ಇದುವರೆಗೂ ಹಣ ಕೊಟ್ಟಿಲ್ಲ. ಜೊತೆಗೆ ಟೆಕ್ನಿಶಿಯನ್‌, ಸಿನಿಮಾಟೋಗ್ರಾಫರ್‌ಗೆ ಕೊಡಬೇಕಾದ ಹಣವನ್ನು ಕೂಡಾ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿದೆ ಎಂದು ಹೇಳಿದ್ದಾರೆ.

ಇದರಲ್ಲಿ ರಿಷಿಕೇಶ್‌ ಅವರದ್ದು ಯಾವುದೇ ತಪ್ಪಿಲ್ಲ. ಈ ಹಿಂದೆ ನಾವು ರಾಜಲಕ್ಷ್ಮಿ ಅವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಈ ವೇಳೆ ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದ್ದರು. ಆದರೆ, ಈಗ ಅವರ ವರ್ತನೆಯೇ ಬೇರೆಯಾಗಿದೆ ಎಂದು ಅನಿತಾ ಭಟ್‌ ಹೇಳಿದ್ದಾರೆ.

 

Share Post