BengaluruHealth

ಮನೆಮನೆಗೂ ಬರಲಿದ್ದಾರೆ ವೈದ್ಯರು; ರಾಜ್ಯದಲ್ಲಿ ಜಾರಿಯಾಗುತ್ತಾ ಗೃಹ ಆರೋಗ್ಯ ಯೋಜನೆ..?

ಬೆಂಗಳೂರು; ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಮಹತ್ವದ ಯೋಜನೆಯೊಂದರನ್ನು ಜಾರಿಗೆ ತರೋದಕ್ಕೆ ಚಿಂತನೆ ನಡೆಸುತ್ತಿದೆ. ಜನ ಸಾಮಾನ್ಯರ ಆರೋಗ್ಯ ಕಾಳಜಿಗಾಗಿ ಗೃಹ ಆರೋಗ್ಯ ಯೋಜನೆ ಜಾರಿ ಮಾಡುವುದರ ಬಗ್ಗೆ ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ. ವೈದ್ಯರನ್ನು ಮನೆಮನೆಗೂ ಕಳುಹಿಸಿ, ಕಾಲಕಾಲಕ್ಕೆ ಜನರಿಗೆ ತಪಾಸಣೆ, ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಇದರಿಂದಾಗಿ ಬಡವರಿಗೆ, ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲಿದೆ ಅನ್ನೋದು ಸರ್ಕಾರದ ಉದ್ದೇಶ.

ಆರೋಗ್ಯ ಇಲಾಖೆ ವತಿಯಿಂದ ಈ ರೀತಿಯ ವಿನೂತನ ಯೋಜನೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಸರ್ಕಾರಿ ಆಸ್ಪತ್ರೆಗಳು ಇದ್ದರೂ, ಕೆಲವರಿಗೆ ಅಲ್ಲಿಯವರೆಗೂ ಹೋಗಲು ಆಗುತ್ತಿಲ್ಲ. ಇನ್ನು ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನೇ ಜನರ ಬಳಿಗೆ ಕಳುಹಿಸಿದರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ನರ್ಸ್‌ಗಳು ಮನೆಮನೆಗೂ ಹೋಗಿ ಜನರ ಆರೋಗ್ಯ ವಿಚಾರಿಸುತ್ತಿದ್ದರು. ಅಗತ್ಯವೆನಿಸಿದರೆ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬರುತ್ತಿದ್ದರು. ಇದೀಗ ಇದೇ ತರದ ಯೋಜನೆ ಜಾರಿ ಮಾಡಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಎಂದು ಸರ್ಕಾರ ಈ ಬಗ್ಗೆ ಯೋಚನೆ ಮಾಡುತ್ತಿದೆ.

ಮನೆಮನೆಗೆ ವೈದ್ಯರನ್ನು ಕಳುಹಿಸಿ ಅವರ ಆರೋಗ್ಯ ತಪಾಸಣೆ ಮಾಡಿಸುವುದು, ಬಿಪಿ, ಶುಗರ್‌, ಜ್ವರ, ಸಣ್ಣಪುಟ್ಟ ಕಾಯಿಲೆಗಳಿಗೆ ಅಲ್ಲೇ ಚಿಕಿತ್ಸೆ ನೀಡುವುದು ಇದರ ಉದ್ದೇಶ. ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರುವುದು, ಅಲ್ಲಿ ಸಕ್ಸಸ್‌ ಆದರೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವುದು ಸರ್ಕಾರದ ಉದ್ದೇಶ. ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಈ ವಿಚಾರ ಇಟ್ಟು ಒಪ್ಪಿಗೆ ಪಡೆದು ಅನಂತರ ಎಂಟು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಚುನಾವಣೆ ಹತ್ತಿರವಾಗುತ್ತಿದ್ದಾಗ ಈ ಹಿಂದಿನ ಬಿಜೆಪಿ ಸರ್ಕಾರ, ದೆಹಲಿ ಮಾದರಿಯಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಇನ್ನೂ ಸ್ವಲ್ಪ ಮುಂದೆ ಹೋಗಿದೆ. ಮನೆಗೇ ಹೋಗಿ ಚಿಕಿತ್ಸೆ ನೀಡಲು ಮುಂದಾಗಿದೆ.

Share Post