ಟೊಮ್ಯಾಟೋ ಬೆಳೆದು ಒಂದೇ ತಿಂಗಳಿಗೆ ಕೋಟ್ಯಧಿಪತಿಗಳಾದ ದಂಪತಿ..!
ಮುಂಬೈ; ಟೊಮ್ಯಾಟೋ ಬೆಲೆ ಗಗನಕ್ಕೇರಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಕೋಲಾರದಲ್ಲಿ ಮೂವರು ಸಹೋದರರು ಟೊಮ್ಯಾಟೋ ಬೆಳೆದು ಇನ್ನೂ ಕೆಲವೇ ದಿನಗಳಲ್ಲಿ ಕೋಟ್ಯಧೀಶರಾಗುವ ಸುದ್ದಿಯನ್ನೂ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ರೈತ ದಂಪತಿ ಒಂದೇ ತಿಂಗಳಲ್ಲಿ ಟೊಮ್ಯಾಟೋ ಮಾರಿ ಕೋಟ್ಯಧೀಶರಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯ 36 ವರ್ಷ ರೈತ ಈಶ್ವರ್ ಗಾಯ್ಕರ್ ಟೊಮ್ಯಾಟೋ ಬೆಳೆದಿದ್ದು, ಒಂದೇ ತಿಂಗಳಲ್ಲಿ ಕೋಟ್ಯಧೀಶರಾಗಿದ್ದಾರೆ. ಇವರು ಒಂದು ತಿಂಗಳಲ್ಲಿ 17000 ಕ್ರೇಟ್ ಟೊಮ್ಯಾಟೋವನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಅವರಿಗೆ 2 ಕೋಟಿ 80 ಲಕ್ಷ ರೂಪಾಯಿ ಆದಾಯ ಬಂದಿದೆ. ಇನ್ನೂ ಈ ಆದಾಯ 3.5 ಕೋಟಿ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಗಾಯ್ಕರ್ ಗೆ 18 ಎಕರೆ ಜಮೀನಿದ್ದು, ಇದರಲ್ಲಿ 12 ಎಕರೆಯಲ್ಲಿ ಟೊಮ್ಯಾಟೋ ಬೆಳೆಯಲಾಗಿದೆ. ಈ ಹಿಂದೆ ಅವರು ಸಾಕಷ್ಟು ಬಾರಿ ನಷ್ಟ ಅನುಭವಿಸಿದ್ದ ಅವರು ಈ ಬಾರಿ ಬಂಪರ್ ಬೆಲೆ ಹಾಗೂ ಬೆಳೆ ಎರಡೂ ಬಂದಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.