BengaluruPolitics

ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆಯ ಆಸೆ ಇಲ್ಲ; ಎಐಸಿಸಿ ಅಧ್ಯಕ್ಷ ಖರ್ಗೆ

ಬೆಂಗಳೂರು; ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಇಲ್ಲ. ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ನಾವು ಆಸಕ್ತಿ ಹೊಂದಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಮಹಾಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ಆಯಾ ರಾಜ್ಯಗಳಲ್ಲಿ ವಿವಿಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದ್ರೆ, ನಾವು ಅದನ್ನೆಲ್ಲಾ ಬದಿಗಿಟ್ಟು ಜನರನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ನಮಗೆ ಅಧಿಕಾರ ಹಿಡಿಯುವ ಉದ್ದೇಶಕ್ಕಿಂತ ಸಂವಿಧಾನ, ಪ್ರಜಾಪ್ರಭುತ್ವ ಕಾಪಾಡುವುದೇ ನಮ್ಮ ಧ್ಯೇಯ. ಸಮಾನ ಮನಸ್ಕ ಪಕ್ಷಗಳಲ್ಲಿ ರಾಜ್ಯಗಳಿಗೆ ಸೀಮಿತವಾಗಿ ನೋಡೋದಾದರೆ ಹಲವಾರು ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇವೆ. ಆದ್ರೆ ಇದೀಗ ನಾವು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಈಗ ನಾವು ಸೇರಿರುವ 26 ಪಕ್ಷಗಳ 11 ರಾಜ್ಯಗಳಲ್ಲಿ ಸಾಕಷ್ಟು ಬಲಿಷ್ಠವಾಗಿವೆ. ನಾವೆಲ್ಲಾ ಭಿನ್ನಾಭಿಪ್ರಾಯ ಮರೆತು ಒಂದಾದರೆ, ದೇಶವನ್ನು ಉಳಿಸಬಹುದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ವಿಪಕ್ಷಗಳ ಮೇಲೆ ಸಿಬಿಐ ಹಾಗೂ ಇಡಿಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ನಾವೆಲ್ಲಾ ಒಂದಾದರೆ ಸಹಜವಾಗಿಯೇ ಬಿಜೆಪಿಗೆ ಹಿನ್ನಡೆಯಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ನಡೆಯೋಣ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.

Share Post