ನದಿಗೆ ಉರುಳಿದ ಮದುವೆ ದಿಬ್ಬಣದ ಟ್ರಕ್; 5 ಮಂದಿ ದುರ್ಮರಣ
ಭೋಪಾಲ್; ಮದುವೆ ದಿಬ್ಬಣದ ಟ್ರಕ್ ಒಂದು ನದಿಗೆ ಉರುಳಿದ್ದು, ಘಟನೆಯಲ್ಲಿ ಐದು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. ಮಧ್ಯ ಪ್ರದೇಶದ ದಾಟಿಯಾ ಬಳಿ ಈ ದುರಂತ ನಡೆದಿದೆ. ದುರ್ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಮಕ್ಕಳು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಮೃತರೆಲ್ಲರೂ ಗ್ವಾಲಿಯರ್ನ ಬಿಲ್ಹೆಟಿ ಗ್ರಾಮದವರಾಗಿದ್ದಾರೆ. ಟಿಕಮ್ಗರ್ ನಲ್ಲಿ ನಡೆಯುತ್ತಿದ್ದ ಮದುವೆಗೆ ಎಲ್ಲರೂ ತೆರಳುತ್ತಿದ್ದರು. ಮದುಮಗಳ ಕಡೆಯವರು ಎಂದು ತಿಳಿದುಬಂದಿದೆ. ಬುಹಾರಾ ಗ್ರಾಮದಲ್ಲಿರುವ ನದಿಯ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ ಚಕ್ರಗಳು ಜಾರಿ ನದಿಗೆ ಉರುಳಿದ್ದರಿಂದ ಈ ದುರಂತ ನಡೆದಿದೆ. 2 ಹಾಗೂ ಮೂರು ವರ್ಷದ ಮಕ್ಕಳು ಸೇರಿ 65 ವರ್ಷದ ಮಹಿಳೆ ಮತ್ತು 18 ವರ್ಷದ ಹುಡುಗನೊಬ್ಬ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.