CrimeDistricts

ಪ್ರವೀಣ್‌ ಹತ್ಯೆ ಪ್ರಕರಣ; ಆರೋಪಿಗಳಿಗೆ ಪಿಎಫ್‌ಐ, ಎಸ್‌ಡಿಪಿಐ ನಂಟು

ಮಂಗಳೂರು; ಹಿಂದೂ ಪರ ಸಂಘಟನೆ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಗೆ ಪಿಎಫ್‍ಐ ಮತ್ತು ಎಸ್‍ಡಿಪಿಐ ಜೊತೆ ಸಂಬಂಧ ಇರುವುದು ಗೊತ್ತಾಗಿದೆ. ಹತ್ಯೆಯ ಬಳಿಕ ಆರೋಪಿಗಳು ಕಾಸರಗೋಡು ಮಸೀದಿಗೆ ಹೋಗಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಪ್ರಮುಖ ಆರೋಪಿಗಳ ಬಂಧನದ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ ಅಲೋಕ್‌ ಕುಮಾರ್,  ಹತ್ಯೆಯಲ್ಲಿ ನೇರವಾಗಿ ಭಾಗಿಯಾದವರನ್ನು ಇಂದು ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದೇವೆ. ಸುಳ್ಯದ ಶಿಯಾಬ್ (33), ಅಂಕತಡ್ಕದ ರಿಯಾಜ್ (27)‌ ಹಾಗೂ ಸುಳ್ಯದ ಎಲಿಮಲೆ ನಿವಾಸಿ ಬಶೀರ್‌ ಬಂಧಿತ ಆರೋಪಿಗಳು. ಶಿಯಾಬ್‌ ಕ್ಯಾಂಪ್ಕೋ ಕಂಪನಿಗೆ ಕೊಕೊ ವಿತರಣೆ ಮಾಡುವ ಕೆಲಸ ಮಾಡುತ್ತಾರೆ.  ರಿಯಾಜ್‌ ಕೋಳಿ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಶೀರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬ್ಲ್ಯಾಕ್ ಸ್ಪ್ಲೆಂಡರ್ ಬೈಕನ್ನು ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಆರೋಪಿಗಳ ಬಗ್ಗೆ ಮೊದಲೇ ನಮಗೆ ಸುಳಿವು ಸಿಕ್ಕಿತ್ತು. ಆದರೆ ನಾವು ಬಹಿರಂಗ ಮಾಡಿರಲಿಲ್ಲ. ಮುಂದೆ ಈ ರೀತಿಯ ಯಾವುದೇ ಕೃತ್ಯ ನಡೆಯದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಾರೆಂಟ್ ಇಶ್ಯೂ ಮಾಡಿ ಹಂತಕರು ಮತ್ತು ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರನ್ನು ಬಂಧನ ಮಾಡುವುದಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ. ಯಾರನ್ನು ಫಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ಬಂಧಿಸುವುದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

Share Post