ಇಬ್ಬರು ಜಿಲ್ಲಾಧಿಕಾರಿ ಸೇರಿ 14 ಐಎಎಸ್ ಅಧಿಕಾರಿಗಳು ವರ್ಗಾವಣೆ
ಬೆಂಗಳೂರು; ಜಿಲ್ಲಾಧಿಕಾರಿಗಳೂ ಸೇರಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅದರಲ್ಲಿ ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೂ ಸೇರಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
ರಮೇಶ್ ಡಿ.ಎಸ್. ಅವರು ಚಾಮರಾಜನಗರ ಜಿಲ್ಲಾಧಿಕಾರಿ ಆಗಿದ್ದರು. ಇದೀಗ ಅವರನ್ನು ಬೆಂಗಳೂರು ತೋಟಗಾರಿಕಾ ಇಲಾಖೆ ನಿರ್ದೇಶಕರ ಹುದ್ದೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ನಿದೇಶಕರಾಗಿದ್ದ ಮೀನಾ ನಾಗರಾಜ್ ಸಿ.ಎನ್ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲು ಸೂಚಿಸಲಾಗಿದೆ.
ಇನ್ನು ಜಿ.ಪ್ರಭು ಅವರು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾಗಿದ್ದರು. ಇದೀಗ ಅವರನ್ನು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಐಎಎಸ್ ಅಧಿಕಾರಿ ನವೀನ್ ಸಾಗರ್ ಸಿಂಗ್ ಅವರನ್ನೂ ವರ್ಗಾಯಿಸಲಾಗಿದೆ. ಅವರನ್ನು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಜಂಟಿ ನಿರ್ದೇಶಕರಾಗಿದ್ದ ಡಾ. ಗೋಪಾಲ ಕೃಷ್ಣ ಹೆಚ್.ಎನ್ ಅವರು ಈಗ ಬೆಂಗಳೂರು ಕಾರ್ಮಿಕ ಇಲಾಖೆ ಆಯುಕ್ತರಾಗಿದ್ದಾರೆ. ಐಎಎಸ್ ಅಧಿಕಾರಿ ಡಾ. ಆನಂದ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ ಮಾಡಲಾಗಿದೆ.