International

ಕೀವ್‌ ಪ್ರದೇಶ ಮತ್ತೆ ಉಕ್ರೇನ್‌ ಸುಪರ್ದಿಗೆ; ಯುದ್ಧ ಕೊನೆಗೊಳಿಸುವತ್ತ ರಷ್ಯಾ

ಕೀವ್: ಕಳೆದ ಒಂದೂವರೆ ತಿಂಗಳಿಂದ ರಷ್ಯಾ ಸೈನಿಕರು ಉಕ್ರೇನ್‌ನಲ್ಲಿ ದಾಳಿ ನಡೆಸುತ್ತಿದ್ದಾರೆ. ಕೀವ್‌ ನಗರ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡಿದ್ದರು. ಆದ್ರೆ ಈಗ ಕೀವ್‌ ಪ್ರದೇಶದ ನಿಯಂತ್ರಣ ಮತ್ತೆ ನಮ್ಮ ಸುಪರ್ದಿಗೆ ಸಿಕ್ಕಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಹೀಗಂತ ಉಕ್ರೇನ್‌ ಉಪ ರಕ್ಷಣಾ ಸಚಿವ ಗನ್ನಾ ಮಲಿಯಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಷ್ಯಾ ಯುದ್ಧ ಕೊನೆಗೊಳಿಸುವ ಚಿಂತನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ ಸುತ್ತಮುತ್ತಲ ಪಟ್ಟಣಗಳು ಹಾಗೂ ಪ್ರದೇಶಗಳಿಂದ ರಷ್ಯಾ ಸೇನೆ ಹೊರನಡೆಯುತ್ತಿದೆ. ಕಾರ್ಯಾಚರಣೆಯನ್ನೂ ನಿಲ್ಲಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೀವ್‌ ಪ್ರದೇಶವನ್ನು ಉಕ್ರೇನ್‌ ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದೆ.

ರಷ್ಯಾದ ದಾಳಿಯಿಂದಾಗಿ ಇರ್ಪಿನ್, ಬುಚಾ, ಗೊಸ್ಟೊಮೆಲ್ ಮತ್ತು ಕೀವ್ ಪ್ರದೇಶಗಳು ರಷ್ಯಾ ನಿಯಂತ್ರಣಕ್ಕೆ ಬಂದಿದ್ದವು. ಆದ್ರೆ ಈಗ ಈ ಪ್ರದೇಶಗಳು ರಷ್ಯಾ ಆಕ್ರಮಣದಿಂದ ಮುಕ್ತವಾಗಿವೆ. ಇರ್ಪಿನ್‌, ಬುಚಾ, ಗೊಸ್ಟೊಮೆಲ್‌ ಪಟ್ಟಣಗಳು ಕೀವ್‌ ನಗರದ ವಾಯವ್ಯ ಭಾಗದಲ್ಲಿದ್ದು, ರಷ್ಯಾ ಸೇನೆಯ ದಾಳಿಯಿಂದ ಈ ಪಟ್ಟಣಗಳು ಭಾರಿ ಹಾನಿಗೊಳಗಾಗಿದ್ದವು. ಇಲ್ಲಿನ ವಾಸಿಗಳು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಈ ಪಟ್ಟಣಗಳು ಕೂಡಾ ಉಕ್ರೇನ್‌ ಸುಪರ್ದಿಗೆ ಬಂದಿವೆ. ಇದ್ರಿಂದಾಗಿ ಇಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಕೀವ್ ನಗರದ ಬಳಿಯ ಗೊಸ್ಟೊಮೆಲ್ ವಾಯುನೆಲೆಯ ಮೇಲೆ ಹಿಡಿತ ಸಾಧಿಸಲು ರಷ್ಯಾ ಭಾರಿ ಹೋರಾಟ ನಡೆಸಿತ್ತು. ಆದ್ರೆ ಇದೀಗ ಉಕ್ರೇನ್ ಉತ್ತರ ಭಾಗದಿಂದ ರಷ್ಯಾ ಪಡೆಗಳು ಖಾಲಿ ಮಾಡುತ್ತಿವೆ.

Share Post