International

20ವರ್ಷಗಳಿಂದ ಸಹಜೀವನ: ಕೊನೆಗೆ ಯುದ್ಧ ಭೂಮಿಯಲ್ಲಿ ವಿವಾಹವಾದ ಜೋಡಿ

ಉಕ್ರೇನ್:‌ ಉಕ್ರೇನ್‌ನಲ್ಲಿ ಯುದ್ಧವು ವಿನಾಶವನ್ನು ಸೃಷ್ಟಿ ಮಾಡ್ತಿದೆ.  ಸಾವಿರಾರು ಸೈನಿಕರು ಹಾಗೂ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವು ಮನೆಗಳು ಧ್ವಂಸಗೊಂಡಿವೆ. ಈ ಯುದ್ಧದಿಂದ ರಷ್ಯಾ ಹಿಂದೆ ಸರಿಯುತ್ತೋ ಇಲ್ಲವೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ಉಕ್ರೇನ್ ಸೇನೆಯು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಷ್ಯಾದ ಪಡೆಗಳೊಂದಿಗೆ ಹೋರಾಡುತ್ತಿದೆ. ಇಂತಹ ಭೀಕರ ಯುದ್ಧ ಸಮಯದಲ್ಲಿ ಉಕ್ರೇನ್‌ನ ಇಬ್ಬರು ಸೈನಿಕರು ಒಂದಾಗಿದ್ದಾರೆ. ಸಹ ಸೈನಿಕರ ನಡುವೆ ಮಿಲಿಟರಿ ಸಮವಸ್ತ್ರದಲ್ಲಿಯೇ ಜೋಡಿ ವಿವಾಹವಾಗಿದ್ದಾರೆ.

ಉಕ್ರೇನಿಯನ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಲೆಸ್ಯಾ ಮತ್ತು ವ್ಯಾಲೆರಿ ಅವರು ಕೀವ್‌ನಲ್ಲಿ ವಿವಾಹವಾಗಿದ್ದಾರೆ. ಉಕ್ರೇನ್‌ನ ಸಾಂಪ್ರದಾಯಿಕ ಗೀತೆಗಳ ನಡುವೆ, ಸಹ ಸೈನಿಕರಾದ ಲೆಸ್ಯಾ ಮತ್ತು ವ್ಯಾಲೆರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ 20 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ರು, ಅವರಿಗೆ 18 ವರ್ಷದ ಮಗಳು ಕೂಡಾ ಇದ್ದಾಳೆ. ಅಂತಿಮವಾಗಿ ಈ ಯುದ್ಧದ ಸಮಯದಲ್ಲಿ ವಿವಾಹವಾಗಲು ನಿರ್ಧಾರ ಮಾಡಿದ್ದಾರೆ. ಮದುವೆಯ ವೀಡಿಯೋವನ್ನು ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಜರ್ಮನಿಯ ವರದಿಗಾರ ಪಾಲ್ ರೋನ್‌ಝೈಮರ್ ಹಂಚಿಕೊಂಡಿದ್ದಾರೆ. ಬಳಿಕ ಈ ವಿಡಿಯೋ ವೈರಲ್ ಆಗಿದೆ.

ಮತ್ತೊಂದೆಡೆ ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ಹಲವು ನಗರಗಳನ್ನು ವಶಪಡಿಸಿಕೊಳ್ಳಲು ಮುನ್ನುಗ್ಗುತ್ತಿವೆ. ಕೀವ್, ಖಾರ್ಕಿವ್, ಮಾರಿಪೋಲ್ ಮತ್ತು ಸುಮಿಯಲ್ಲಿ ಬಾಂಬ್ ದಾಳಿ ಮುಂದುವರೆದಿದೆ. ಉಕ್ರೇನ್ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರಷ್ಯಾದ ಪಡೆಗಳೊಂದಿಗೆ ಹೋರಾಡುವುದನ್ನು ಮುಂದುವರೆಸಿವೆ. ಉಕ್ರೇನ್ ಅಧ್ಯಕ್ಷರು NATO ದೇಶಗಳಿಗೆ ನೆರವು ನೀಡದಂತೆ ಮನವಿ ಮಾಡಿದ್ದಾರೆ. ಅದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷರು ಉಕ್ರೇನ್ ಶರಣಾಗುವವರೆಗೂ ಯುದ್ಧವನ್ನು ಕೊನೆಗೊಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Share Post