Bengaluru

ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಕಳಂಕ ಬಂದಿದೆ-ಡಿ.ಕೆ.ಶಿವಕುಮಾರ್

ಬೆಂಗಳೂರು: ನಗರದಲ್ಲಿ ಬಿ.ಕೆ.ಹರಿಪ್ರಸಾದ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ರು. ಈ ಬಿಜೆಪಿ ಸರ್ಕಾರದಿಂದಲೇ ಬೆಂಗಳೂರು ಹಾಗೂ ರಾಜ್ಯಕ್ಕೆ ಕಳಂಕ ಬಂದಿದ್ದು, ಈ ಸರ್ಕಾರ ಕಿತ್ತೊಗೆಯಲು ನೀವೆಲ್ಲರೂ ತ್ಯಾಗ ಮಾಡಬೇಕು. ನೀವು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ನಿಮಗೆ ಹುದ್ದೆ ಸೃಷ್ಟಿ ಮಾಡಿಯಾದರೂ ನೀಡುತ್ತೇವೆ.

ಶ್ರಮ ಇಲ್ಲದೆ ಫಲ ಇಲ್ಲ, ಭಕ್ತಿ ಇಲ್ಲದೆ ಭಗವಂತನಿಲ್ಲ. ಈ ಪಕ್ಷವನ್ನು ಮುಗಿಸುತ್ತೇವೆ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಎಷ್ಟೇ ಹೇಳಿದರೂ ಅದು ಸಾಧ್ಯವಿಲ್ಲ. ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿ ಬಲಿಷ್ಠ ಸರ್ಕಾರವೇ ಮಂಡಿಯೂರಿ ಕ್ಷಮೆ ಕೋರುವಂತೆ ಮಾಡಿದರಲ್ಲ. ಈ ದೇಶದ ಅನ್ನದಾತ ಎಷ್ಟು ಶಕ್ತಿಶಾಲಿ ಎಂಬುದು ಅರಿವಾಗುತ್ತದೆ.

ಹರಿಪ್ರಸಾದ್ ಅವರು ಹೇಳಿದಂತೆ ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷದ ರಕ್ತ ನಿಮ್ಮ ಮೈಯಲ್ಲಿ ಹರಿಯುತ್ತಿದೆ.ನಾವು ಪಾದಯಾತ್ರೆ ಮಾಡುತ್ತಿರುವುದು ನನ್ನನ್ನು ಬಿಂಬಿಸಲು ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ಜನರ ಸಮಸ್ಯೆಗೆ ಸ್ಪಂದಿಸಲು ನಾವು ಹೆಜ್ಜೆ ಹಾಕುತ್ತೇವೆ. ಹೆಣ್ಣು ಮಕ್ಕಳು, ವಯಸ್ಸಾದವರು, ಮಕ್ಕಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಇದು ಇತಿಹಾಸ ಪುಟಕ್ಕೆ ಸೇರಿದೆ.

ಬೆಂಗಳೂರು ನಗರ, ರೈತರ ರಕ್ಷಣೆಗೆ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ 7 ದಿನ ಬಾಕಿ ಉಳಿದಿತ್ತು, ಆದರೆ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 3 ಕ್ಕೆ ಮೇಕೆದಾಟು ಪಾದಯಾತ್ರೆ ಅಂತ್ಯಗೊಳಿಸಲು ತೀರ್ಮಾನಿಸಿದ್ದೇವೆ. ಸದ್ಯದಲ್ಲೇ ಪಾದಯಾತ್ರೆ ಮಾರ್ಗ ಕೂಡ ಪ್ರಕಟಿಸಲಾಗುವುದು.

ಇದು ಪಕ್ಷಾತೀತ ಹೋರಾಟವಾಗಿದ್ದು, ಎಲ್ಲ ವರ್ಗದವರಿಗೆ ಆಹ್ವಾನ ನೀಡಿ ಕರೆದುಕೊಂಡು ಬನ್ನಿ. ಕಡೇ ದಿನ ಬಸವನಗುಡಿಯಲ್ಲಿ ದೊಡ್ಡ ಸಭೆ ಮಾಡಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದ್ರು.

Share Post