ನಿಷೇಧಿತ ಸಂಘಟನೆಗಳ ಜೊತೆ ಯಾರೂ ನಂಟು ಇಟ್ಟುಕೊಳ್ಳಬೇಡಿ; ಸಿಎಂ ಬೊಮ್ಮಾಯಿ
ಬೆಂಗಳೂರು; ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ದಾರಿಯೇ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಬಗ್ಗೆ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಅವರು, ನಿಷೇಧಿತ ಸಂಘಟನೆಗಳ ಜೊತೆ ಯಾರೂ ನಂಟು ಇಟ್ಟುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.
ಪಿಎಫ್‌ಐ ಕರ್ನಾಟಕದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದು ಜಗಜ್ಜಾಹೀರಾಗಿದೆ. ಈ ಸಂಘಟನೆಯ ಬಹಳಷ್ಟು ಜನ ಪ್ರಮುಖರು ಗಡಿಯಾಚೆ ಹೋಗಿ ತರಬೇತಿ ಪಡೆದವರಿದ್ದಾರೆ. ಅವರು ಅಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಹಲವಾರು ವರ್ಷ, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳ ಜನ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ. ವಿರೋಧ ಪಕ್ಷದವರೂ, ಸಿಪಿಐ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಕೂಡ ಪಿಎಫ್ಐ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದ್ದರು ಎಂದೂ ಸಿಎಂ ಹೇಳಿದ್ದಾರೆ.