ವೈಎಸ್‌ಆರ್ ಕಾಂಗ್ರೆಸ್‌ನಿಂದ ಜನಾರ್ದನರೆಡ್ಡಿ ಸ್ಪರ್ಧೆ..?
ಕೊಪ್ಪಳ; ಗಂಗಾವತಿಯಲ್ಲಿ ಮನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ರಾಜಕೀಯದ ೨ನೇ ಇನಿಂಗ್ಸ್ ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಅವರು ಹೊಸ ಪಕ್ಷ ಕಟ್ಟುತ್ತಾರೆ ಎನ್ನಲಾಗಿತ್ತು. ಇದೀಗ ಬೇರೆಯದೇ ಸುದ್ದಿ ಹರಿದಾಡುತ್ತಿದೆ. ಆಂಧ್ರದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯಿಂದ ಕರ್ನಾಟಕದಲ್ಲಿ ಸ್ಪರ್ಧಿಸಲು ರೆಡ್ಡಿ ಉತ್ಸಾಹ ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಮರಳಲು ಪ್ರಯತ್ನಿಸಿದ್ದರು. ಆದ್ರೆ ವರಿಷ್ಠರ ಸಮ್ಮತಿ ದೊರೆಯದೇ ನಿರಾಶರಾಗಿದ್ದರು. ಈ ಮಧ್ಯೆ ಆಂಧ್ರದ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯನ್ನು ಕರ್ನಾಟಕಕ್ಕೂ ವಿಸ್ತರಿಸುವ ಉತ್ಸುಕತೆ ಹೊಂದಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹೈದರಾಬಾದ್‌ನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರೇ ನೀಡಿರುವ ಡೆಡ್‌ಲೈನ್ ಡಿಸೆಂಬರ್ 18 ರ ನಂತರ ಅವರ ರಾಜಕೀಯ ಸ್ಪಷ್ಟ ನಿಲುವು ಬಹಿರಂಗವಾಗಲಿದೆ.
ಗಣಿ ನಾಡಿನಲ್ಲಿ ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲದಲ್ಲಿ ವೈ. ಎಸ್. ರಾಜಶೇಖರ ರೆಡ್ಡಿ (ಜಗನ್ ಮೋಹನ್ ರೆಡ್ಡಿ ಅವರ ತಂದೆ) ಅವರು ಆಂಧ್ರದ ಮುಖ್ಯಮಂತ್ರಿಯಾಗಿದ್ದರು. ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಜನಾರ್ದನ ರೆಡ್ಡಿ ಅವರು ಆಂಧ್ರ ಮೂಲಕ ಗಣಿ ಅದಿರನ್ನು ವಿದೇಶಕ್ಕೆ ಸರಾಗವಾಗಿ ಸರಬರಾಜು ಮಾಡುತ್ತಿದ್ದರು. ಕರ್ನಾಟಕ – ಆಂಧ್ರ ಗಡಿಯಲ್ಲಿ ನಿರಾಂತಕವಾಗಿ ಗಣಿಗಾರಿಕೆ ಕೈಗೊಂಡಿದ್ದರು. ಓಬಳಾ ಪುರಂ ಗಣಿ ವಿಚಾರದಲ್ಲಿ ಅವರು ಆಂಧ್ರ – ಕರ್ನಾಟಕ ಗಡಿ ರೇಖೆ ಧ್ವಂಸ ಮಾಡಿದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ.
ಬಳ್ಳಾರಿ ಪ್ರವೇಶಕ್ಕೆ ಅನುಮತಿ ಇಲ್ಲದ್ದರಿಂದ ಗಂಗಾವತಿಯಲ್ಲಿ ಮನೆ ಮಾಡಿರುವೆ. ಡಿಸೆಂಬರ್ 18 ರ ನಂತರ ರಾಜಕೀಯ ವಿಚಾರವಾಗಿ ಮಾತನಾಡುವೆ’ ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.