BengaluruPoliticsUncategorized

ಬಿಎಸ್‌ವೈರಿಂದ ಬೊಮ್ಮಾಯಿವರೆಗೆ; 2023ರ ಚುನಾವಣೆ ಕತೆ ಏನು..?

ಬೆಂಗಳೂರು; ಇದೇ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊ೦ಡಿದ್ದರು. ಬೆಂಗಳೂರಿನಲ್ಲಿ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಿದರು. ನಂತರ ಅವರು ಮೈಸೂರು ಅರಮನೆಯ ಆವರಣದಲ್ಲಿ ನಡೆದ ವಿಶ್ವಯೋಗಾ ದಿನಾಚರಣೆಯಲ್ಲಿ ಪಾಲ್ಗೊಂಡರು.  ಮೋದಿಯವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ರಾಜ್ಯಪಾಲರು, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಹಲವು ನಾಯಕರು ಮೋದಿಯವರನ್ನು ಬರಮಾಡಿಕೊಂಡರು. ಈ ವೇಳೆ ಪ್ರಧಾನಿ ಮೋದಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಿದರು.  ಈ ವೇಳೆ ನಡೆದ ಅವರ ನಡುವಿನ ಒಡನಾಟ ಲಿಂಗಾಯತ ಸಮುದಾಯದ ಬಲಶಾಲಿ ನಾಯಕನನ್ನು ಮೋದಿ ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಸಾಬೀತುಪಡಿಸಿತ್ತು.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟರು. ಬಿಎಸ್‌ವೈ ಅಧಿಕಾರ ತ್ಯಾಗ ಮಾಡಿದರೂ, ಮೋದಿ ಹಾಗೂ ಬಿಎಸ್‌ವೈ ನಡುವಿನ ಪ್ರೀತಿ, ಅಪ್ಯಾಯಮಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಅವರಿಬ್ಬರು ಆತ್ಮೀಯತೆ ಈಗಲೂ ಹಾಗೆಯೇ ಇದೆ. ಹೀಗಾಗಿಯೇ ಮೋದಿಯವರು ಬೆಂಗಳೂರಿಗೆ ಬಂದಿಳಿದಾಗ ಯಡಿಯೂರಪ್ಪ ಅವರನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಿದ್ದರು. ಆದರೆ, ಬಿಜೆಪಿಯ ತಳಮಟ್ಟದಲ್ಲಿ ಯಡಿಯೂರಪ್ಪ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.   2023ರ ಚುನಾವಣೆಯಲ್ಲಿ ಬಿಎಸ್‌ವೈ ಅವರನ್ನು ಬಳಸಿಕೊಳ್ಳಲು ಪಕ್ಷ ಹೆಚ್ಚು ಆಸಕ್ತಿ ತೋರುತ್ತಿಲ್ಲ. “ಬಿಎಸ್‌ವೈ ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿ 9 ತಿಂಗಳೇ ಕಳೆದುಹೋಗಿದೆ. ಈ ಒಂಬತ್ತು ತಿಂಗಳಲ್ಲಿ ಎದುರಾದ ಉಪಚುನಾವಣೆ ಹಾಗೂ ಎಂಎಲ್‌ಸಿ ಚುನಾವಣೆಗಳಲ್ಲಿ ಬಿಎಸ್‌ವೈ ಅವರನ್ನು ಬಳಸಿಕೊಂಡಿಲ್ಲ. ಈ ಕಾರಣಕ್ಕಾಗಿಯೇ ಈ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಇನ್ನು ಅಧಿಕಾರ ತ್ಯಾಗ ಮಾಡಿದ ಮೇಲೆ ಬಿಎಸ್‌ವೈ ಅವರು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದರು. ಅದಕ್ಕಾಗಿ ವಿಶೇಷ ಕಾರೊಂದನ್ನೂ ತರಿಸಿಕೊಂಡಿದ್ದರು. ಆದರೆ ಅದಕ್ಕೂ ಅಡ್ಡಗಾಲು ಹಾಕಿ ನಿಲ್ಲಿಸಲಾಯಿತು. ಇನ್ನು ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆದ ಕೆಲವು ಪಕ್ಷದ ಕಾರ್ಯಕ್ರಮಗಳಿಗೂ ಬಿಎಸ್‌ವೈ ಅವರನ್ನು ಆಹ್ವಾನಿಸಿರಲಿಲ್ಲ. ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಉಳಿದಿದೆ ಮತ್ತು ಬಿಜೆಪಿ ಇನ್ನೂ ಮಿಷನ್ ಮೋಡ್‌ಗೆ ಬಂದಂತೆ ಕಾಣುತ್ತಿಲ್ಲ ”ಎಂದು ಬಿಎಸ್‌ವೈ ಆಪ್ತ ಮೂಲಗಳು ಹೇಳುತ್ತಿವೆ.

ಬಿಎಸ್‌ವೈ ಅವರನ್ನು ಬಳಸಿಕೊಳ್ಳುವುದು ಅಥವಾ ಬಿಡುವುದರ ಬಗ್ಗೆ ಬಿಜೆಪಿ ಪಕ್ಷಕ್ಕೆ ಸಂದಿಗ್ಧತೆ ಇದೆ. ಯಡಿಯೂರಪ್ಪ ಅವರು ಅಖಾಡಕ್ಕೆ ಇಳಿದರೆ, ಪಕ್ಷದ ನೇತೃತ್ವ ವಹಿಸಿಕೊಂಡರೆ,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನ ದುರ್ಬಲಗೊಳ್ಳುತ್ತದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ದೂರ ಇಡಲಾಗುತ್ತಿದೆ ಎಂಬ ಅನಿಸಿಕೆಗಳೂ ವ್ಯಕ್ತವಾಗುತ್ತಿವೆ. ಬಿಎಸ್‌ವೈ ರಣರಂಗಕ್ಕೆ ಬಂದರೆ ಪವರ್‌ ಫುಲ್ ಆಗಿ ಬರುತ್ತಾರೆ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಅನೇಕ ರಾಜಕೀಯ ಪಂಡಿತರು ಬಿಎಸ್‌ವೈ ಅವರನ್ನು ನಿಷ್ಪಕ್ಷಪಾತ ಶಕ್ತಿ ಎಂದು ನೋಡುತ್ತಿದ್ದಾರೆ. ಹೀಗಿರುವಾಗಲೇ ಬಿಜೆಪಿಯಲ್ಲಿ ಮುಂದಿನ ಲಿಂಗಾಯತ ನಾಯಕ ಯಾರು, ಯಡಿಯೂರಪ್ಪ ಪರಂಪರೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಬೊಮ್ಮಾಯಿ ಅಥವಾ ಬಿಎಸ್‌ವೈ ಪುತ್ರ ವಿಯೇಂದ್ರ  ಇವರಿಬ್ಬರಲ್ಲಿ ಯಾರು..? ಪಕ್ಷ ಏನೋ ಬಸವರಾಜ ಬೊಮ್ಮಾಯಿಯವರನ್ನು ಮುಂದಿಟ್ಟಿದೆ. ಆದ್ರೆ ಅದು ರಾಜವಂಶದ ರಾಜಕೀಯವನ್ನು ನಿರುತ್ಸಾಹಗೊಳಿಸುವುದರಿಂದ ವಿಯೇಂದ್ರ ಅವರನ್ನು ಮೀಸಲು ಬೆಂಚ್‌ಗಳಲ್ಲಿ ಇರಿಸಿದೆ ಎನ್ನುತ್ತಿದ್ದಾರೆ ಬಿಜೆಪಿಯಲ್ಲಿನ ಕೆಲವರು.

“ ಇನ್ನು ವಿಜಯೇಂದ್ರರ ವಿಷಯಕ್ಕೆ ಬಂದರೆ ಅವರ ಜನಪ್ರಿಯತೆ ಬಿಜೆಪಿಗೆ ಎರಡು ಅಲುಗಿನ ಕತ್ತಿಯಂತಾಗಿ ಕಾಣುತ್ತದೆ. ಪಕ್ಷ ವಿಜಯೇಂದ್ರ ಅವರನ್ನು ಪ್ರೋತ್ಸಾಹಿಸಿದರೆ,  ಶಾಸಕರ ಸಂಖ್ಯೆಯನ್ನು ಹೆಚ್ಚಿಸುವ ಶಕ್ತಿ ಅವರಿಗಿದೆ. ಆದರೆ ಪಕ್ಷ ಅವರನ್ನು ಮೂಲೆಗುಂಪು ಮಾಡಲು ಹೋದರೆ, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಬಿಜೆಪಿ ಬಲಗೊಳ್ಳಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಲಾಭ ಗಳಿಸಬೇಕು. ಇಲ್ಲಿ ವಿಜಯೇಂದ್ರ ಈಗಾಗಲೇ ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ.  ಅವರು ಈಗಾಗಲೇ ಸಿದ್ದರಾಮಯ್ಯ ಅಥವಾ ಅವರ ಮಗ ಯತೀಂದ್ರ ವಿರುದ್ಧ ವರುಣಾದಿಂದ ಸ್ಪರ್ಧಿಸುವ ಕುರಿತು ಸಂದೇಶಗಳನ್ನು ರವಾನಿಸಿದ್ದಾರೆ.  ಹಳೇ ಮೈಸೂರು ಭಾಗದ ಚಾಮರಾಜನಗರ, ಗುಂಡ್ಲುಪೇಟೆ ಅಥವಾ ಹನೂರು ಕ್ಷೇತ್ರಗಳ ಬಗ್ಗೆಯೂ ವಿಜಯೇಂದ್ರ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.  ಅವರು ಎಲ್ಲೇ  ಸ್ಪರ್ಧಿಸಿದರೂ ಅಕ್ಕ ಪಕ್ಕದ ಕ್ಷೇತ್ರಗಳ ಮೇಲೆ ಅದು ಪರಿಣಾಮ ಬೀರಲಿದೆ. ಆದ್ರೆ ಪಕ್ಷ ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಾದರೆ ಅವರು ಒಂದು ವರ್ಷ ಮೊದಲೇ ಅಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಆದರೆ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಆದ್ರೆ ಇನ್ನೂ ಪಕ್ಷ ಮಾತ್ರ ಇನ್ನೂ ಯಾವುದೇ ಸಂದೇಶಗಳನ್ನು ರವಾನಿಸಿಲ್ಲ. ಇನ್ನು ವಿಜಯೇಂದ್ರ ಅವರ ಕೊನೆಯ ಆಯ್ಕೆ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ. ಈ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆದ್ದು ಬರುತ್ತಾನೆ. ಹೀಗಾಗಿ ಇಲ್ಲಿ ವಿಜಯೇಂದ್ರ ಸ್ಪರ್ಧಿಸುವುದರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದು ಬಿಎಸ್‌ವೈ ಆಪ್ತ ಮೂಲಗಳು ಹೇಳುತ್ತಿವೆ.

ಆದಾಗ್ಯೂ, ಬಿಜೆಪಿಗೆ ಕರ್ನಾಟಕ ರಾಜ್ಯ ದಕ್ಷಿಣ ಭಾರತದ ಹೆಬ್ಬಾಗಿಲು. ಆದ್ರೆ ಇಲ್ಲಿ ವ್ಯಕ್ತಿ ಆಧಾರಿತ ಚುನಾವಣಾ ಪ್ರಚಾರವನ್ನು ಮಟ್ಟ ಹಾಕಲು ಸಾಧ್ಯವೇ ಎಂಬ ದೊಡ್ಡ ಪ್ರಶ್ನೆ ಮೂಡುತ್ತದೆ. ಬಿಜೆಪಿ ಪಕ್ಷ ಮಿಷನ್ ಸೌತ್‌ನ ಭಾಗವಾಗಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಾಲ್ವರು ಅಸಾಧಾರಣ ವ್ಯಕ್ತಿಗಳಾದ ಪಿಟಿ ಉಷಾ, ಇಳಯರಾಜ, ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು‌ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಇದು ಬಿಜೆಪಿಗೆ ಬೇರೆಯದೇ ರೀತಿಯ ಇಮೇಜ್‌ ಗಳಿಸಿಕೊಟ್ಟಿದೆ ನಿಜ. ಆದ್ರೆ ಕರ್ನಾಟಕದ ವಿಷಯಕ್ಕೆ ಬಂದರೆ ಮತ್ತೆ ಮತ್ತೆ ಪಕ್ಷದ ಲೆಕ್ಕಾಚಾರಗಳು ತಲೆಕೆಳಗಾಗಿ ಹೋಗಿವೆ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತ್ತು ಜೆಡಿಎಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಈ ಮೂವರಿಗೂ ಅವರದೇ ಆದ ವರ್ಚಸ್ಸು ಮತ್ತು ವ್ಯಕ್ತಿತ್ವವಿದೆ.

2013ರಲ್ಲಿ ಬಿಎಸ್‌ವೈ ಪಕ್ಷದಿಂದ ಹೊರನಡೆದಾಗ ಬಿಜೆಪಿಗೆ ಕಹಿ ಸೋಲುಂಟಾಗಿತ್ತು. ಈಗ ಕಾಲ ಬದಲಾಗಿದೆ. ಬಿಎಸ್‌ವೈ ರಾಜಕೀಯ ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ವಿಜಯೇಂದ್ರ ಅವರನ್ನು ಬಲಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಇನ್ನು ವಿಜಯೇಂದ್ರ ಈಗಾಗಲೇ ಕೊಟ್ಟ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ವಿಜಯೇಂದ್ರ ಅವರು ಹಲವು ಚುನಾವಣೆಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪಕ್ಷ ಯಡಿಯೂರಪ್ಪ ಅವರನ್ನು ದೂರ ಇಟ್ಟರೆ ಕಷ್ಟವಾಗುತ್ತದೆ. ಬಿಎಸ್‌ವೈ ಮುಂದಾಳತ್ವ ವಹಿಸದೇ ಇದ್ದಲ್ಲಿ ಪಕ್ಷ 60 ಸ್ಥಾನಕ್ಕೆ ಕುಸಿಯಬಹುದು ಎಂಬ ಆತಂಕ ಬಿಜೆಪಿಯಲ್ಲಿನ ಕೆಲವರದ್ದು. 2018ರಲ್ಲಿ ಮೋದಿ, ಷಾ ಮತ್ತು ಬಿಎಸ್‌ವೈ ಅವರ ಎಲ್ಲಾ ಆಕರ್ಷಣೆ, ಶಕ್ತಿ ಇದ್ದರೂ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಆಗ ಯತೀಂದ್ರ ಸಿದ್ದರಾಮಯ್ಯ  ವಿರುದ್ಧ ವರುಣಾದಿಂದ ಸ್ಪರ್ಧಿಸಲು ವಿಜಯೇಂದ್ರ ಟಿಕೆಟ್ ಕೇಳಿದ್ದರು. ಆದರೆ ಪಕ್ಷ ನಿರಾಕರಿಸಿತ್ತು. ಒಂದು ವೇಳೆ ಅವರಿಗೆ ಆಗ ಟಿಕೆಟ್‌ ನೀಡಿದ್ದಿದ್ದರೆ ಅವರೂ ಗೆಲ್ಲುವುದಲ್ಲದೆ, ಬಿಜೆಪಿಗೆ ಇನ್ನೂ 10ಕ್ಕೂ ಹೆಚ್ಚು ಸ್ಥಾನಗಳು ಸಿಗುತ್ತಿದ್ದವು. ಆದ್ರೆ ನಾಯಕರ ತಪ್ಪು ನಿರ್ಧಾರದಿಂದ ಹಲವು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಹಾಗೆ ಆಗಬಾರದು. ಅದಕ್ಕಾಗಿ ಬಿಎಸ್‌ವೈ ಮತ್ತು ಬೊಮ್ಮಾಯಿ ನಡುವೆ ಉತ್ತಮ ಸಾಮರಸ್ಯ ಪಕ್ಷಕ್ಕೆ ಅಗತ್ಯವಾಗಿದೆ ಎಂದು ಬಿಜೆಪಿಯ ಒಳಗಿನವರೇ ಹೇಳುತ್ತಿದ್ದಾರೆ.

ಕೇಸರಿ ಪಕ್ಷಕ್ಕೆ ಮತ್ತೊಂದು ಆತಂಕಕಾರಿ ಅಂಶವೆಂದರೆ ಬೊಮ್ಮಾಯಿ ಸರ್ಕಾರದ ಕಾರ್ಯಕ್ಷಮತೆ ಕಳಪೆಯಾಗಿರೋದು. ಬಿಜೆಪಿ ಶಾಸಕರು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಲ್ಲಿ ಈ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಇದರಿಂದ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳಾಗುತ್ತಿವೆ. “ಇತ್ತೀಚಿನ ಕೆಲವು ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು ಇದನ್ನು ಸೂಚಿಸಿವೆ. ಹಳೇ ಮೈಸೂರು ಮತ್ತು ಬೆಂಗಳೂರು ಮಹಾನಗರದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದ್ದು, 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಎಸ್‌ವೈ ಸಿಎಂ ಫೇವರಿಟ್ ಆಗಿದ್ದು, ನಂತರದ ಸ್ಥಾನದಲ್ಲಿ ಸಿಎಂ ಬೊಮ್ಮಾಯಿ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಬಿಎಸ್‌ವೈ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಬಿಜೆಪಿ ಸಾಕಷ್ಟು ಕೆಲಸ ಮಾಡಬೇಕಾಗಿದೆ.

Share Post