ಕುಲಪತಿ ಹುದ್ದೆಗೆ 5 ಕೋಟಿ ಹಣ; ಪ್ರತಾಪ ಸಿಂಹ ಹೇಳಿಕೆ ಪ್ರಸ್ತಾಪಿಸಿ ಡಿಕೆಶಿ ತರಾಟೆ
ಬೆಳಗಾವಿ; ಸಂಸದ ಪ್ರತಾಪ ಸಿಂಹ ಅವರು ಉಪಕುಲಪತಿ ಹುದ್ದೆಗೆ ಲಂಚ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಸರ್ಕಾರದಲ್ಲಿ ಯಾರಿಗೆ ಈ ಹಣ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ತುಂಬಾ ಅನುಭವ ಹೊಂದಿರುವ ವಿದ್ಯಾವಂತರು. ಉಪಕುಲಪತಿಗಳ ಹುದ್ದೆಗೆ 5 ಕೋಟಿ ರೂಪಾಯಿ ನೀಡಬೇಕು ಎಂದು ಈ ಸಂಸದರು ಹೇಳಿದ್ದಾರೆ. ಇಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅದು ಸರಿಯಲ್ಲ. ಉಪಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ ಎಂದು ಡಿಕೆಶಿ ಹೇಳಿದರು.
ಈ ವಿಚಾರವನ್ನು ವಿಧಾನ ಪರಿಷತ್ ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಕೂಡಲೇ ಲೋಕಾಯುಕ್ತ, ಇಡಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಇವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು. ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಾಳೆ ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು.