ಸುವರ್ಣ ಸೌಧದಲ್ಲಿ ಹುಟ್ಟುಹಬ್ಬಕ್ಕೆ ಅವಕಾಶ ಕೊಡಿ; ವಕೀಲನಿಂದ ವಿಚಿತ್ರ ಮನವಿ
ಬೆಳಗಾವಿ; ಅಧಿವೇಶನ ಮುಗಿದ ಮೇಲೆ ಸುವರ್ಣ ಸೌಧದಲ್ಲಿ ಯಾವುದೇ ಚಟುವಟಿಕೆ ನಡೆಯೋದಿಲ್ಲ. ಹೀಗಾಗಿ ಇಲ್ಲಿ ನನ್ನ ಮಗಳ ಹುಟ್ಟುಹಬ್ಬ ಆಚರಿಸಲು ಅವಕಾಶ ಕೊಡಿ ಎಂದು ವಕೀಲರೊಬ್ಬರು ಪರಿಷತ್ ಸಭಾಪತಿಗೆ ಮನವಿ ಸಲ್ಲಿಸಿದ್ದಾರೆ.
ಗೋಕಾಕ ತಾಲೂಕು ಬಡಿಗವಾಡ ಗ್ರಾಮದ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವವರು, ಸುವರ್ಣ ಸೌಧ ಬಾಡಿಗೆಗೆ ನೀಡುವಂತೆ ಸಭಾಪತಿಗೆ ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಈ ರೀತಿ ಬರೆಯಲಾಗಿದೆ;
ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟುಹಬ್ಬವನ್ನು ಆಚರಿಸುವುದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ʼಹುಟ್ಟದಟ್ಟಿʼ ಮಾಡುವ ಪದ್ಧತಿಯಿದ್ದು, ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕೆಂದು ವಿನಂತಿ.
ಈ ರೀತಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದು. ಸದ್ಯ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ನಮಗೆ ಬಾಡಿಗೆ ನೀಡಬೇಕೆಂದು ಕಳಕಳಿಯ ವಿನಂತಿ ಎಂದು ಪತ್ರದಲ್ಲಿ ಬರೆದಿದ್ದಾರೆ.