BengaluruUncategorized

ಕಸದ ಸಮಸ್ಯೆ ನಿವಾರಣೆಗೆ ಜನರ ಪಾಲ್ಗೊಳ್ಳುವಿಕೆ, ಅಧಿಕಾರಿಗಳ ಜವಾಬ್ದಾರಿ ಬಹಳ ಅಗತ್ಯ: ಶ್ರೀ ಸುಭಾಷ್ ಬಿ. ಆಡಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆಗಾಗಿ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಅಧಿಕಾರಿಗಳ ಜವಾಬ್ದಾರಿ ಬಹಳ ಪ್ರಮುಖವಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಕಸದ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಮಾನ್ಯ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಮಟ್ಟದ ರಾಷ್ಟ್ರೀಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಸುಭಾಷ್ ಬಿ. ಆಡಿ ರವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016 ಅನುಷ್ಠಾನ, ಘನತ್ಯಾಜ್ಯ ನಿರ್ವಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಯ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರವು ರಾಜ್ಯದ ರಾಜಧಾನಿ ಎಂಬ ದೃಷ್ಟಿಯಿಂದಷ್ಟೇ ಅಲ್ಲದೆ, ರಾಷ್ಟ್ರದ ದೃಷ್ಟಿಯಿಂದಲೂ ಪ್ರಮುಖ ನಗರವಾಗಿದ್ದು, ಕಸದ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಇರುವ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಪಾಲಿಕೆಯ ಅಧಿಕಾರಿಗಳು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಸರಿಯಾಗಿ ಹರಿತು ನಾಗರಿಕರ ಸಹಭಾಗಿತ್ವದೊಂದಿಗೆ ನಿಯಮಗಳನ್ನು ಎಲ್ಲಾ ವಲಯಗಳಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ನಗರದಲ್ಲಿ ಎಲ್ಲಾ ನಿವಾಸಿಗಳೂ ತಮ್ಮ ಜವಾಬ್ದಾರಿಯನ್ನು ಅರಿತು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಕೊಡಬೇಕು. ಜೊತೆಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ನಾಗರಿಕರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವಿದೆಯೇ ಎಂಬುದನ್ನು ತಿಳಿಯಬೇಕು. ನಗರದಲ್ಲಿ ಶೇ. 40 ರಷ್ಟು ತ್ಯಾಜ್ಯ ದೊಡ್ಡ ಗಾತ್ರದ ಕಸ(ಬಲ್ಕ್ ಜನರೇಟರ್ಸ್-100 ಕೆ.ಜಿಗೂ ಹೆಚ್ಚು ತ್ಯಾಜ್ಯ) ಉತ್ಪಾದಕರಿಂದ ಬರುತ್ತಿದೆ. ಈ ಸಂಬಂಧ ಬಲ್ಕ್ ಜೆನರೇಟರ್ಸ್ ತ್ಯಾಜ್ಯ ಸಂಗ್ರಹ ಮಾಡಲು ಪಾಲಿಕೆಯಲ್ಲಿ ಎಷ್ಟು ಮಂದಿ ನೋಂದಣಿಯಾಗಿದ್ದಾರೆ, ಎಷ್ಟು ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ, ಎಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಜೊತೆಗೆ ಕಸ ಉತ್ಪತ್ತಿಯ ಸ್ಥಳಗಳ ಸಮೀಕ್ಷೆ, ಅಂಗಡಿ/ಅಪಾರ್ಟ್ಮೆಂಟ್ಸ್ ಗಳ ಸಂಖ್ಯೆ, ಅಂಗಡಿಗಳ ವಿಧ, ಸಂಗ್ರಹಣೆಯಾಗುವ ಕಸ ಸೇರಿದಂತೆ ಇನ್ನಿತ್ಯಾದಿ ಮಾಹಿತಿ ಪಾಲಿಕೆಯಲ್ಲಿ ಲಭ್ಯವಿರಬೇಕು ಎಂದು ಅವರು ಹೇಳಿದರು.

ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಸಿ ಸ್ಥಳಗಳಲ್ಲಿ ಕಸ ಬಿಸಾಡುವುದಕ್ಕೆ ಸರಿಯಾದ ಶಿಕ್ಷೆ ಹಾಗೂ ದಂಡದ ಕ್ರಮಗಳು ಸರಿಯಾಗಿ ಜಾರಿಯಾಗಬೇಕು. ತ್ಯಾಜ್ಯವನ್ನು ಸರಿಯಾದ ಅನುಕ್ರಮದಲ್ಲಿ ನೀಡುವ ಸಂಬಂಧ ಜನಜಾಗೃತಿಯಾಗಬೇಕು. ಅವಶ್ಯಕತೆಯಿದ್ದಲ್ಲಿ ಜಾಗೃತಿ ಕಾರ್ಯಾಗಾರಗಳನ್ನೂ ನಡೆಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ಅವರು ಮಾತನಾಡಿ, ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಮೈಕ್ರೊ ಪ್ಲಾನ್ ಮಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಹೆಚ್ಚು-ಹೆಚ್ಚು ದಂಡವನ್ನು ವಿಧಿಸುವ ಕೆಲಸ ಆಗಬೇಕು. ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಕೊಡುವ ಬಗ್ಗೆ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

Share Post