BengaluruPolitics

ದೇಶದಲ್ಲಿ ಪ್ರಜಾಪ್ರಭುತ್ವ ದಮನವಾಗುತ್ತಿದೆ; ಸಚಿನ್‌ ಪೈಲಟ್‌

ಬೆಂಗಳೂರು;  ಕಳೆದ ಕೆಲವು ದಿನಗಳಿಂದ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅದಾನಿ ಸಮೂಹದ ವಿಚಾರವಾಗಿ ಬಹಳ ಚರ್ಚೆ ಆಗುತ್ತಿದೆ. ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದು, ಈ ವಿಚಾರಗಳನ್ನು ಸಂಸತ್ತಿನಲ್ಲಿ ಕಡತದಿಂದ ತೆಗೆದುಹಾಕಲಾಗುತ್ತಿದೆ. ಬಿಜೆಪಿಗೆ ಬಹುಮತ ಇದೆ ಎಂಬ ಕಾರಣಕ್ಕೆ ಸದನದ ಸದಸ್ಯರ ವಿಚಾರವನ್ನು ಕಡತದಿಂದ ತೆಗೆದುಹಾಕುವುದು ಸರಿಯಲ್ಲ. ಪ್ರಧಾನಮಂತ್ರಿಗಳು ನಮ್ಮ ನಾಯಕರ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರಿಸಲು ಆಗಲಿಲ್ಲ ಎಂದು ರಾಜಸ್ಥಾನದ ಕಾಂಗ್ರೆಸ್‌ ನಾಯಕ ಸಚಿವ ಪೈಲಟ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಾ, ಸಾರ್ವಜನಿಕ ಉದ್ದಿಮೆಗಳನ್ನು ಕಿಡಿಮೆ ಮೊತ್ತಕ್ಕೆ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸೆಬಿ, ಆರ್ ಬಿಐ ಸೇರಿದಂತೆ ಎಲ್ಲ ಸಂಸ್ಥೆಗಳು ಮೌನವಾಗುಳಿದಿವೆ. ಹೀಗಾಗಿ ಈ ವಿಚಾರವಾಗಿ ಪ್ರಶ್ನೆ ಮಾಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ. ಸರ್ಕಾರ ಈ ವಿಚಾರದಲ್ಲಿ ಯಾವುದೇ ವಿಚಾರ ಮುಚ್ಚಿಡುವ ಉದ್ದೇಶವಿಲ್ಲವಾದರೆ ಜಂಟಿ ಸದನ ಸಮಿತಿ ರಚನೆಗೆ ಯಾಕೆ ಹಿಂದೇಟಾಕ್ಕುತ್ತಿದೆ? ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಸಮಿತಿಯಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಾಗಿ ಇರುತ್ತಾರೆ. ಆದರೂ ಸರ್ಕಾರ ಮಾತ್ರ ಜಂಟಿ ಸದನ ಸಮಿತಿ ರಚಿಸಲು ಹಿಂಜರಿಯುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದರು.

ಬೇರೆ ವಿಚಾರದಲ್ಲಿ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಯಲಿ ಎಂದು ಹೇಳುತ್ತಾರೆ. ಈ ವಿಚಾರದಲ್ಲೂ ನಾವು ಅದನ್ನೇ ಕೇಳುತ್ತಿದ್ದೇವೆ. ಆದರೂ ಸರ್ಕಾರ ಮಾತ್ರ ಮೀನಾಮೇಷ ಏಣಿಸುತ್ತಿದೆ. ಆರ್ಥಿಕ ಸಚಿವಾಲಯ, ಪ್ರಧಾನಿಗಳು ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕ ಸತ್ಯಾಂಶದ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಕೋಟ್ಯಂತರ ಜನರ ಉಳಿತಾಯದ ಹಣವನ್ನು ಸಾರ್ವಜನಿಕ ಉದ್ಯಮದ ಮೇಲೆ ಹಾಕಿದ್ದು. ಆ ಹಣವನ್ನು ರಕ್ಷಣೆ ಮಾಡುವುದು ಅವರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ಆದರೆ ಈ ಸರ್ಕಾರ ಅದಾನಿ ಮೂಹದ ವಿಚಾರದಲ್ಲಿ ಯಾವುದೇ ತನಿಖೆ ನಡೆಸಲು ಮುಂದೆ ಬರುತ್ತಿಲ್ಲ. ಬಿಜೆಪಿ ನಾಯಕರು ನಾಖಾವೂಂಗಾ ನಾ ಖಾನೇದೂಂಗ ಎನ್ನುತ್ತಿದ್ದರು. ಆದರೆ ಈಗ ದೇಶದ ಜನರ ಹಣ ಲೂಟಿ ಮಾಡುತ್ತಿರುವಾಗ ಇವರು ಕಣ್ಣುಮುಚ್ಚಿಕೊಂಡು ಕೂತಿದ್ದಾರೆ. ಇದರ ಸತ್ಯಾಂಶ ತಿಳಿಯಬೇಕಾದರೆ ಜಂಟಿ ಸದನ ಸಮಿತಿ ರಚನೆ ಆಗಬೇಕಿದೆ ಎಂದು ಸಚಿನ್‌ ಪೈಲಟ್‌ ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದಮನ ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕರ ಹೇಳಿಕೆಯನ್ನು ದಾಖಲೆಗಳಿಂದ ತೆಗೆಯಲಾಗುತ್ತಿದೆ. ಪತ್ರಿಕಾಗೋಷ್ಠಿ ಮಾಡುತ್ತಿಲ್ಲ, ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ, ಜಂಟಿ ಸದನ ಸಮಿತಿ ರಚನೆ ಮಾಡುತ್ತಿಲ್ಲ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ. ಬಿಜೆಪಿ ಸರ್ಕಾರ ದೇಶದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

 

ಹೀಗಾಗಿ ಮುಂಬರುವ ಕರ್ನಾಟಕ ಹಾಗೂ ಇತರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ಅದರಲ್ಲೂ ಕರ್ನಾಟಕದ ಜನ ಕೆಲಸ ಮಾಡುವ ಸರ್ಕಾರವನ್ನು ನಿರೀಕ್ಷಿಸುತ್ತಿದ್ದಾರೆ. ಅವರಿಗೆ ಉದ್ಯೋಗ ಬೇಕು. ಹೀಗಾಗಿ ಇಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನ ಬೆಂಬಲ ಸಿಗಲಿದೆ. ಕಾಂಗ್ರೆಸ್ ಅತಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಇಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗಿದೆ. ಇದು ಬಿಜೆಪಿ ಸರ್ಕಾರದ ವಿದಾಯದ ಬಜೆಟ್ ಆಗಿದೆ. ಕರ್ನಾಟಕ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದುರಾಡಳಿತದ ಮೂಲಕ 40% ಕಮಿಷನ್ ಸರ್ಕಾರ ಎಂದು ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಸರ್ಕಾರಿ ಹುದ್ದೆಗಳು ಮಾರಾಟವಾಗುತ್ತಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಸಚಿನ್‌ ಪೈಲಟ್‌ ಹೇಳಿದರು.

Share Post