ರಾಷ್ಟ್ರ ವಿರೋಧಿ, ಸುಳ್ಳು ಹಬ್ಬಿಸುವ ಯುಟ್ಯೂಬ್ ಚಾನೆಲ್‌ಗಳನ್ನು ಬಂದ್ ಮಾಡಲಾಗುವುದು – ಅನುರಾಗ್ ಠಾಕೂರ್
ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕುರ್ ಅವರು ಯೂಟೂಬರ್ಸ್ ಮೇಲೆ ಗುಡುಗಿದ್ದಾರೆ. ದ್ವೇಶ ಹರಡುವ ಹಾಗೂ ರಾಷ್ಟ್ರ ವಿರೋಧಿ ಯೂಟ್ಯೂಬ್ ಚಾನೆಲ್‌ಗಳನ್ನು ಮುಲಾಜಿಲ್ಲದೆ ಬಂದ್ ಮಾಡಲಾಗುವುದು ಎಂದು ಕೇಂದ್ರ ಸಚಿವ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕಳೆದ ತಿಂಗಳು ಬಿಪಿನ್ ರಾವತ್ ಅವರ ಸಾವಿಗೆ ಸಂಬಂಧಿಸಿದಂತೆ ತಪ್ಪು ಸುದ್ದಿಗಳನ್ನು ಕೆಲವು ಚಾನೆಲ್‌ಗಳು ಬಿತ್ತರಿಸಿದ್ದವು. ಇದರಿಂದ ದೇಶ ವಿರೋಧಿ ಭಾವನೆ ಮೂಡಿಸುವ ಪ್ರಯತ್ನ ನಡೆದಿದೆ ಎಂಬ ಕಾರಣಕ್ಕೆ ಕೇಂದ್ರ ಪ್ರಸಾರ ಇಲಾಖೆ 20ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ಬಂದ್ ಮಾಡಲಾಗಿದೆ..
ಈಗ ಸಚಿವರು ಮತ್ತೊಮ್ಮೆ ಇದೇ ವಿಷಯ ಪ್ರಸ್ತಾಪಿಸಿ, ರಾಷ್ಟ್ರ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದರ ಬಗ್ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಯೂಟ್ಯೂಬ್‌ನಲ್ಲಿ ಜನರ ದಾರಿ ತಪ್ಪಿಸುವವರ ಮೇಲೆ ಈಗಾಗಲೇ ಅನೇಕ ರಾಷ್ಟ್ರಗಳು ಕ್ರಮ ಕೈಗೊಂಡಿವೆ. ಯೂಟ್ಯೂಬ್ ಸಂಸ್ಥೆ ಕೂಡ ಇದರ ಮೇಲೆ ಕಣ್ಣಿಟ್ಟಿದೆ. ನಾವು ಕೂಡ ಸುಳ್ಳು ಹೇಳುವವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.