Sports

ಕೂಲ್‌ ಕ್ಯಾಪ್ಟನ್ ಶಾಕಿಂಗ್‌ ನಿರ್ಣಯ: ಚನ್ನೈ ಸೂಪರ್‌ ಕಿಂಗ್ಸ್‌ ಹೊಸ ಕ್ಯಾಪ್ಟನ್‌ ಆಗಿ ರವೀಂದ್ರಾ ಜಡೇಜಾ..!

ಚನ್ನೈ: ಐಪಿಎಲ್ 2022ರ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಸಿಎಸ್‌ಕೆ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಧೋನಿ ಬಹಿರಂಗಪಡಿಸಿದ್ದಾರೆ.  ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್‌ ಮಾಡಿದೆ. ಎಂಎಸ್ ಧೋನಿ 2008 ರಿಂದ ಸಿಎಸ್‌ಕೆ ನಾಯಕರಾಗಿ ಇದುವರೆಗೆ ನಾಲ್ಕು ಬಾರಿ ಚೆನ್ನೈಗೆ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿದ್ದಾರೆ. ಐಪಿಎಲ್ 2022 ಪಂದ್ಯಾವಳಿ ಪ್ರಾರಂಭವಾಗುವ ಎರಡು ದಿನಗಳ ಮೊದಲು, ಧೋನಿ ಅವರು ನಾಯಕತ್ವದಿಂದ ಕೆಳಗಿಳಿದಿರುವುದಾಗಿ ಘೋಷಿಸಿದ್ದಾರೆ. ಇದೀಗ ಅವರ ಸ್ಥಾನಕ್ಕೆ  ರವೀಂದ್ರ ಜಡೇಜಾಗೆ ಸಿಎಸ್‌ಕೆ ಅಧಿಕಾರ ಹಸ್ತಾಂತರಿಸಿದೆ.

CSK ತನ್ನ ಮೊದಲ ಪಂದ್ಯವನ್ನು ಶನಿವಾರ (ಮಾರ್ಚ್ 26) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಈ ಬಾರಿ ಆರಂಭಿಕ ಪಂದ್ಯದಲ್ಲಿ ಎಡಗೈ ಆಲ್‌ರೌಂಡರ್ ಜಡೇಜಾ ಹಾಲಿ ಚಾಂಪಿಯನ್ ಆಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಜಡೇಜಾ 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂರನೇ ಆಟಗಾರನಾಗಿ ಜಡೇಜಾ ಮುಂದುವರಿಯಲಿದ್ದಾರೆ ಎಂದು ಸಿಎಸ್‌ಕೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನಾಯಕತ್ವದಿಂದ ಕೆಳಗಿಳಿದಿದ್ದರೂ ಧೋನಿ ತಂಡದಲ್ಲಿ ಮುಂದುವರೆಯಲಿದ್ದಾರೆ.  ಚೆನ್ನೈ ತಂಡದ ಟೂರ್ನಮೆಂಟ್‌ನ 15 ವರ್ಷಗಳ ಇತಿಹಾಸದಲ್ಲಿ ಧೋನಿ ನಾಯಕತ್ವದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಸಿಎಸ್‌ಕೆ, ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಆದರೆ, ಚೆನ್ನೈ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ಒಮ್ಮೆ ಮಾತ್ರ ವಿಫಲವಾಯಿತು. ಧೋನಿ ಮತ್ತು ಸುರೇಶ್ ರೈನಾ ನಂತರ ಜಡೇಜಾ ಅವರು ಸಿಎಸ್‌ಕೆ ನಾಯಕತ್ವ ವಹಿಸಿಕೊಂಡ ಮೂರನೇ ಆಟಗಾರರಾಗಿದ್ದಾರೆ.

Share Post