ಮೈಸೂರಲ್ಲಿ ವಿಜಯೇಂದ್ರ ರಿವರ್ಸ್ ಆಪರೇಷನ್; ಸಿಎಂಗೆ ನಿರಾಸೆ ತಂದ ʻಸದಾನಂದʼ
ಮೈಸೂರು; ಕಳೆದ ನಾಲ್ಕು ದಿನಗಳಿಂದ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಹೊರಬರಲಿದ್ದಾರೆ.. ಈ ನಾಲ್ಕು ದಿನಗಳಲ್ಲಿ ಹಲವು ಬಿಜೆಪಿ ಮುಖಂಡರಿಗೆ ಗಾಳ ಹಾಕಿದ್ದರು.. ಅದರಲ್ಲಿ ವರುಣಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸದಾನಂದ ಅವರನ್ನೂ ಸೆಳೆದಿದ್ದರು.. ಅಂದುಕೊಂಡಂತೆ ಆಗಿದ್ದರೆ, ಇಂದು ಸಂಜೆ ಸದಾನಂದ ಅವರು ಕೂಡಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಬೇಕಿತ್ತು.. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಿವರ್ಸ್ ಆಪರೇಷನ್ ಮಾಡಿದ್ದು, ಅದರಲ್ಲಿ ಸಕ್ಸಸ್ ಆಗಿದ್ದಾರೆ..
ಸಿಎಂಗೆ ಠಕ್ಕರ್ ಕೊಟ್ಟ ವಿಜಯೇಂದ್ರ;
ವರುಣಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸದಾನಂದ ಅವರು ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸಿದ್ದರು.. ವಿಜಯೇಂದ್ರ ಅವರನ್ನು 2018ರ ಚುನಾವಣೆಯಲ್ಲೇ ವರುಣಾ ಕ್ಷೇತ್ರಕ್ಕೆ ಕರೆತರಲು ಪ್ರಯತ್ನ ಪಟ್ಟಿದ್ದರು.. ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಅತ್ಯಾಪ್ತರಾಗಿದ್ದ ಸದಾನಂದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದರು.. ಆದ್ರೆ ವಿ.ಸೋಮಣ್ಣಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು.. ಇದರಿಂದ ಸದಾನಂದ ಅವರು ಕೊಂಚ ಅಸಮಾಧಾನಗೊಂಡಿದ್ದರು.. ಇದೀಗ ಸಿಎಂ ಸಿದ್ದರಾಮಯ್ಯ ಅವರು, ಹೇಗಾದರೂ ಮಾಡಿ ಮೈಸೂರು-ಕೊಡಗು ಕ್ಷೇತ್ರವನ್ನು ಗೆಲ್ಲಬೇಕೆಂದು ಪ್ಲ್ಯಾನ್ ಮಾಡಿದ್ದರು.. ರೆಸಾರ್ಟ್‌ನಲ್ಲಿ ಕುಳಿತು ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಆಪ್ತರಿಗೆ ಗಾಳ ಹಾಕಿದ್ದರು.. ಅದರಲ್ಲಿ ಸದಾನಂದ ಕೂಡಾ ಒಬ್ಬರು.. ಕಾಂಗ್ರೆಸ್ ಸೇರಲು ಸದಾನಂದ ಒಪ್ಪಿದ್ದರು.. ಇಂದು ಸಂಜೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಕೂಡಾ ಇತ್ತು.. ಆದ್ರೆ ಮಂಗಳವಾರ ರಾತ್ರಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಿವರ್ಸ್ ಆಪರೇಷನ್ ಮಾಡಿದ್ದಾರೆ.. ಸದಾನಂದರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಂಡಿದ್ದು, ಸಿಎಂ ಸಿದ್ದರಾಮಯ್ಯಗೆ ಠಕ್ಕರ್ ಕೊಟ್ಟಿದ್ದಾರೆ..
ಸಿಎಂ ತವರಲ್ಲಿ ವಿಜಯೇಂದ್ರ ತಂತ್ರಗಾರಿಕೆ;
ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಆಪರೇಷನ್ ಹಸ್ತ ಶುರು ಮಾಡಿದ್ದರು.. ಬಿಜೆಪಿ ನಾಯಕರಾದ ಶಿವಣ್ಣ, ಹೆಚ್.ವಿ.ರಾಜೀವ್, ಸದಾನಂದ ಮುಂತಾದವರಿಗೆ ಆಹ್ವಾನ ಕೊಟ್ಟಿದ್ದರು.. ಇದಕ್ಕೆ ಮೂವರೂ ನಾಯಕರೂ ಒಪ್ಪಿದ್ದರು.. ಇದರ ಜೊತೆಗೆ ಹಲವು ಮಾಜಿ ಕಾರ್ಪರೇಟರ್‌ಗಳು, ಮುಖಂಡರು ಕೂಡಾ ಕಾಂಗ್ರೆಸ್ ಸೇರಲು ಒಪ್ಪಿಗೆ ಕೊಟ್ಟಿದ್ದರು.. ಆದ್ರೆ ಯಾವಾಗ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಸೆಳೆಯುತ್ತಿದ್ದಾರೆ ಎಂದು ಗೊತ್ತಾಯಿತೋ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರ್ಯಪ್ರವೃತ್ತರಾಗಿದ್ದಾರೆ.. ಅವರು ಈಗ ಸಿಎಂ ತವರು ಕ್ಷೇತ್ರ ಮೈಸೂರು-ಕೊಡಗು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.. ಸದಾನಂದರ ಜೊತೆ ಮಾತುಕತೆ ನಡೆಸಿ ಪಕ್ಷದಲ್ಲೇ ಉಳಿಸಿಕೊಂಡು ಸಿಹಿ ತಿನ್ನಿಸಿದ್ದಾರೆ…
ಹಲವು ಕಾರ್ಯಕ್ರಮಗಳಲ್ಲಿ ವಿಜಯೇಂದ್ರ ಭಾಗಿ;
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿರಲಿದ್ದಾರೆ.. ಸಸಂಜೆಯವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.. ಕಾಂಗ್ರೆಸ್ ಸೇರಲು ಮುಂದಾಗಿರುವ ಹಲವು ನಾಯಕರ ಮನವೊಲಿಸುವ ಪ್ರಯತ್ನವೂ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಜೊತೆಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ನಾಯಕರನ್ನು ಸೆಳೆಯುವ ಪ್ರಯತ್ನವೂ ನಡೆದಿದೆ ಎಂದು ಹೇಳಲಾಗಿದೆ.. ಇನ್ನು ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ.. ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ವಾಸು ನಿವಾಸಕ್ಕೆ ವಿಜಯೇಂದ್ರ ಭೇಟಿ
ಇತ್ತೀಚೆಗಷ್ಟೇ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ವಾಸು ಅವರು ನಿಧನರಾಗಿದ್ದರು.. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ನಿವಾಸಕ್ಕೆ ಭೇಟಿ ನೀಡಿದ್ದರು.. ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿರುವ ವಾಸು ನಿವಾಸಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ ಅವರು, ವಾಸು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಹಾಗೂ ವಾಸು ಅವರ ಪುತ್ರ ಕವೀಶ್ ಗೌಡ ಜೊತೆ ಮಾತುಕತೆ ನಡೆಸಿದ್ದಾರೆ.
ಹಲವು ಮುಖಂಡರ ಕಾಂಗ್ರೆಸ್ ಸೇರ್ಪಡೆ;
ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಇಂದೇ ರೆಸಾರ್ಟ್‌ನಿಂದ ಹೊರಬರುತ್ತಿದ್ದಾರೆ.. ಇಂದು ಮೈಸೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.. ಹೆಚ್.ವಿ.ರಾಜೀವ್, ಮಾಜಿ ಸಚಿವ ಶಿವಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ನಾಯಕರು, ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.. ಇದಾದ ಮೇಲೆ ಮೈಸೂರು ನಗರ ವ್ಯಾಪ್ತಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.. ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಂತ್ರಗಾರಿಕೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಿದ್ದರಾಮಯ್ಯ ಆಪರೇಷನ್ ಹಸ್ತ ಮುಂದುವರೆಸಿದ್ದಾರೆ..