Priyank Kharge; ಪತ್ನಿಗೆ ಬ್ರೈನ್ ಟ್ಯೂಮರ್, ಸಹೋದರನಿಗೆ ಕ್ಯಾನ್ಸರ್; ಸಂಕಷ್ಟದಲ್ಲಿ ಪ್ರಿಯಾಂಕ್ ಖರ್ಗೆ
ಕಲಬುರಗಿ; ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಜೊತೆಗೆ ಮಲ್ಲಿಕಾರ್ಜುನ ಖರ್ಗೆಯವರ ಸ್ವಂತ ಜಿಲ್ಲೆಯಲ್ಲೇ ಕಾಂಗ್ರೆಸ್ ಸೋಲಿಸಲು ಬಿಜೆಪಿ ಪಣ ತೊಟ್ಟಿದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಇಬ್ಬರಿಗೂ ಈ ಚುನಾವಣೆ ಸವಾಲಾಗಿದೆ. ಇಂತಹ ಸಂದರ್ಭದಲ್ಲೇ ಪ್ರಿಯಾಂಕ್ ಖರ್ಗೆಗೆ ಹಲವಾರು ಸಂಕಷ್ಟಗಳು ಎದುರಾಗಿವೆ. ಒಂದು ಕಡೆ ಪ್ರಿಯಾಂಕ್ ಖರ್ಗೆ ಪತ್ನಿ ಶ್ರುತಿಗೆ ಬ್ರೈನ್ ಟ್ಯೂಮರ್ ಆಗಿದ್ದು, ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಹೋದರ ರಾಹುಲ್ ಖರ್ಗೆ ಕುತ್ತಿಗೆ ಕ್ಯಾನ್ಸರ್‌ನಿಂದ ಬಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಚುನಾವಣಾ ಪ್ರಚಾರ ಮಾಡಬೇಕಾದ ಪರಿಸ್ಥಿತಿ ಪ್ರಿಯಾಂಕ್ ಖರ್ಗೆಯವರದ್ದು.
ಪ್ರಿಯಾಂಕ್ ಖರ್ಗೆಯವರು ಚಿತ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಆದ್ರೆ, ಪತ್ನಿ ಹಾಗೂ ಸಹೋದರನಿಗೆ ತೀವ್ರ ಅನಾರೋಗ್ಯ ಕಾಡುತ್ತಿರುವುದರಿಂದ ಪ್ರಿಯಾಂಕ್ ಅದರ ನೋವಿನಲ್ಲಿದ್ದಾರೆ. ಇಬ್ಬರನ್ನೂ ನೋಡಿಕೊಳ್ಳುತ್ತಲೇ ಅವರು ಪ್ರಚಾರ ಕೂಡಾ ಮಾಡುತ್ತಿದ್ದಾರೆ. ಮೊದಲಿಗೆ ನಾಮಪತ್ರ ಸಲ್ಲಿಸಿದ ಮೇಲೆ ಪ್ರಿಯಾಂಕ್ ಅವರು ಪ್ರಚಾರ ಸಭೆಗಳಿಗೆ ಬಂದಿರಲೇ ಇಲ್ಲ. ಪತ್ನಿ ಹಾಗೂ ಸಹೋದರನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಇದೀಗ ಪ್ರಚಾರ ಹಾಗೂ ಪತ್ನಿ, ಸಹೋದರ ಯೋಗಕ್ಷೇಮ ಎರಡನ್ನೂ ನೋಡಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಗಿದೆ.
ಬಿಜೆಪಿಯವರು ಹೇಗಾದರೂ ಮಾಡಿ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದ್ದಾರೆ. ತಂದೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಮಗನೇ ಸೋತರೆ ಅವಮಾನವಾಗುತ್ತದೆ. ಬಿಜೆಪಿ ನಾಯಕರು ಆಡಿಕೊಳ್ಳುವುದಕ್ಕೆ ಅಸ್ತ್ರ ಸಿಕ್ಕುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಕಾರಣಕ್ಕೆ ಪ್ರಿಯಾಂಕ್ ಖರ್ಗೆ ನೋವಿನ ನಡುವೆಯೂ ಪ್ರಚಾರ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಿಯಾಂಕ್ ಖರ್ಗೆ ಪತ್ನಿ ಶ್ರುತಿ ಅವರಿಗೆ ಬ್ರೈನ್ ಟ್ಯೂಮರ್ ಆಗಿದೆ ಎಂದು ಗೊತ್ತಾಗಿತ್ತು. ಹೀಗಾಗಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದ್ದು, ಇತ್ತೀಚೆಗಷ್ಟು ಅವರು ಮನೆಗೆ ವಾಪಸ್ಸಾಗಿದ್ದಾರೆ. ಇತ್ತ ಪ್ರಿಯಾಂಕ್ ಸಹೋದರ ರಾಹುಲ್ ಖರ್ಗೆ ಕುತ್ತಿಗೆ ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಹಲವು ತಿಂಗಳುಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಅವರಿಗೆ ಈಗ ಮನೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಹೀಗಿರುವುದರಿಂದ ಪ್ರಿಯಾಂಕ್ ಖರ್ಗೆಯವರಿಗೆ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಇದೆ. ಇನ್ನು ಮಲ್ಲಿಕಾರ್ಜುನ ಖರ್ಗೆಯವರಿಗೂ ಇದೇ ನೋವಿದೆ. ಆದ್ರೆ ಸ್ವಂತ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ನೋವಿನ ನಡುವೆಯೂ ಖರ್ಗೆಯವರು ರಾಜ್ಯಾದ್ಯಂತ ಸುತ್ತಾಡಿ ಪ್ರಚಾರ ನಡೆಸುತ್ತಿದ್ದಾರೆ.