NationalPolitics

ತಾಳ್ಮೆ ಕಾಪಾಡಿ ಸಿದ್ದರಾಮಯ್ಯ ಅಂದ್ರಾ ರಾಹುಲ್‌ ಗಾಂಧಿ..?

ನವದೆಹಲಿ; ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಇಲ್ಲದಿದ್ದರೆ 2023ರ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದೇ ಇಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ರವಾನಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಕುರುಬ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಂತಿಮಂತ್ರ ಬೋಧನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್‌ ಪಕ್ಷ ಯಾವಾಗಲೂ ಶಾಂತಿಯನ್ನು ಬಯಸುತ್ತದೆ. ಹೀಗಾಗಿ ತಾಳ್ಮೆಯಿಂದ ಇರಿ ಎಂಬ ಸಂದೇಶವನ್ನು ಸಿದ್ದರಾಮಯ್ಯ ಅವರಿಗೆ ರಾಹುಲ್‌ ಗಾಂಧಿ ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಂದಹಾಗೆ 2023ರ ಮೇ ತಿಂಗಳಲ್ಲಿ ರಾಜ್ಯ ವಿಧಾಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಿದ್ಧತೆಗಳು ಆರಂಭಿಸಿವೆ. ಈ ಬೆನ್ನಲ್ಲೇ  ಗಾಂಧಿ ಕುಟುಂಬದ ಮೇಲೆ ಇಡಿ ತೂಗುಗತ್ತಿ ನೇತಾಡುತ್ತಿದೆ. ರಾಹುಲ್‌ ಗಾಂಧಿ ಐದು ದಿನ ಇಡಿ ವಿಚಾರಣೆ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ನಾಯಕರು ಪ್ರತಿಭಟನೆಗಳನ್ನು ನಡೆಸಿದರು.  ಅಗ್ನಿಪಥ್‌ ಯೋಜನೆ ವಿರುದ್ಧ ಹೋರಾಟಗಳು, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ ಸೇರಿದಂತೆ ಕಾಂಗ್ರೆಸ್‌ ಹಲವು ವಿಚಾರಗಳಲ್ಲಿ ಬೀದಿಗಳಿದಿದೆ. ಈ ಹೋರಾಟಗಳು ಬ್ಲ್ಯಾಕ್‌ ಮೇಲ್‌ ರಾಜಕಾರಣ ಮಾಡುತ್ತಿರುವವರಿಗೆ ಪ್ರಬಲ ಸಂದೇಶ ನೀಡುವ ವೇದಿಕೆಗಳೂ ಆದವು.

ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಇದ್ದಾರೆ. ಜೊತೆಗೆ ಸಿದ್ದರಾಮಯ್ಯ ಇದ್ದಾರೆ. ಇಬ್ಬರೂ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಹೀಗಾಗಿಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ ಎಂಬುದು ಜಗಜ್ಜಾಹೀರ. ಹೀಗಿರುವಾಗಲೇ ಸಿಎಂ ಅಭ್ಯರ್ಥಿಯಾಗಿ ತನ್ನನ್ನೇ ಘೋಷಣೆ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್‌ ಬಳಿ ಬೆದರಿಕೆ ತಂತ್ರ ಅನುಸರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ರಾಹುಲ್‌ ಗಾಂಧಿ, ಇಡಿ ವಿಚಾರಣೆ ನಡುವೆ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮ ಸಂದೇಶವೊಂದರನ್ನು ರವಾನಿಸಿದ್ದಾರೆ.

“ಕಾಂಗ್ರೆಸ್ ಪಕ್ಷವು ತಾಳ್ಮೆಯನ್ನು ಕಲಿಸುತ್ತದೆ. ನಾನು 2004 ರಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಚಿನ್ ಪೈಲಟ್ ಇದ್ದಾರೆ, ರಂದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ ಜೀ ಇದ್ದಾರೆʼ ಎಂದು  ಉನ್ನತ ಹುದ್ದೆಗಳನ್ನು ಪಡೆಯಲು ಕಾಯುತ್ತಿರುವ ಈ ಕಾಂಗ್ರೆಸ್ ನಾಯಕರನ್ನು ರಾಹುಲ್ ಹೆಸರಿಸಿದ್ದಾರೆ. “ಕಾಂಗ್ರೆಸ್ ಪಕ್ಷ ತಾಳ್ಮೆಯನ್ನು ಕಲಿಸುತ್ತದೆ ಮತ್ತು ಪಕ್ಷದ ನಾಯಕರು ಕೂಡಾ ತಾಳ್ಮೆಯಿಂದ ಇರಬೇಕಾಗುತ್ತದೆಂದು ಕಾಂಗ್ರೆಸ್‌ ನಿರೀಕ್ಷಿಸುತ್ತದೆ. ಆದರೆ ಬಿಜೆಪಿಯಲ್ಲಿ ನೀವು ತಲೆಬಾಗಬೇಕು” ಎಂದು ರಾಹುಲ್ ಹೇಳಿದ್ದಾರೆ. ಇದೇ ವೇಳೆ ರಾಹುಲ್‌ ತಮ್ಮ ತಾಳ್ಮೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು, 50 ಗಂಟೆಗಳ ಕಾಲ ನನ್ನನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾನು ತುಂಬಾ ತಾಳ್ಮೆಯಿಂದ ವರ್ತಿಸಿದ್ದೇವೆ ಎಂದು ರಾಹುಲ್‌ ಉದಾಹರಣೆ ನೀಡಿದ್ದಾರೆ.

ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ ನಂತರ ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಉನ್ನತ ಮೂಲಗಳು ಐಟಿವಿ ನೆಟ್‌ವರ್ಕ್‌ ಅಂಗಸಂಸ್ಥೆಯಾದ ದಿ ಡೈಲಿ ಗಾರ್ಡಿಯನ್ ರಿವ್ಯೂಗೆ ತಿಳಿಸಿವೆ.

“ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಸಿಗಬೇಕಿದ್ದ ಒಂದು ಸ್ಥಾನ ಬಿಜೆಪಿ ಪಾಲಾಗಿದೆ.  ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ನಾವು ಬೆಂಬಲಿಸಿದ್ದೇವೆ ಮತ್ತು ನಾವು ಅವರೊಂದಿಗೆ ಸರಿಯಾಗಿ ವ್ಯವಹರಿಸಿದ್ದರೆ ಅವರು ನಮಗೆ ಅವಕಾಶ ಮಾಡಿಕೊಡುತ್ತಿದ್ದರು ಎಂದು ಕಾಂಗ್ರೆಸ್‌ ಉನ್ನತ  ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರು ಹೈಕಮಾಂಡ್‌ ಮೇಲೆ ಒತ್ತಡ ಹೇರಿ ರಾಜ್ಯಸಶಭೆ ಮಾಜಿ ಡೆಪ್ಯುಟಿ ಸ್ಪೀಕರ್‌ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿ ಖಾನ್‌ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ನೋಡಿಕೊಂಡಿದರು. ಇದು ಜೆಡಿಎಸ್‌ಗೆ ಠಕ್ಕರ್‌ ಕೊಡುವುದು ಹಾಗೂ ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಎಂದು ಬಿಂಬಿಸುವುದು ಅವರ ಉದ್ದೇಶವಾಗಿತ್ತು.  ಇದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಘರ್ಷಣೆಯಾಗಿ ಮಾರ್ಪಾಡಾಯಿತು. ಹೀಗಾಗಿ ಬಿಜೆಪಿಗೆ ಮೂರು ಸ್ಥಾನ ಸಿಗುವಂತಾಯಿತು” ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು ಈ ವೇಳೆ ಕರ್ನಾಟಕದ ಎಲ್ಲಾ ಕಾಂಗ್ರೆಸ್‌ ನಾಯಕರು, ದೇಶದ ವಿವಿಧ ರಾಜ್ಯಗಳ ನಾಯಕರು ಕೂಡಾ ವೇದಿಕೆಯಲ್ಲಿದ್ದರು. ಈ ವೇಳೆಯೇ ರಾಹುಲ್‌ ಬ್ಲ್ಯಾಕ್‌ ಮೇಲ್‌ ತಂತ್ರದ ಬಗ್ಗೆ ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದೇ ಇದ್ದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಒತ್ತಡ ತಂತ್ರಕ್ಕೆ ರಾಹುಲ್‌ ಗಾಂಧಿ ತಾಳ್ಮೆ ಮಂತ್ರ ಪಠಿಸಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ತೋಳ್ಬಲ ಮತ್ತು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಕುಖ್ಯಾತರಾಗಿದ್ದು, ಪಕ್ಷಕ್ಕೆ ಇದು ಚೆನ್ನಾಗಿ ತಿಳಿದಿದೆ.  ಇನ್ನು ಕರ್ನಾಟಕದ ಒಬಿಸಿ ನಾಯಕನಾಗಿ ತಮ್ಮನ್ನು ತಾವು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ, ಪಕ್ಷದ ಹೊರಗೆ ಅಹಿಂದ (ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರು) ರ್ಯಾಲಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕುವ ಮೂಲಕ ತನ್ನ ವರಿಷ್ಠರ ಮೇಲೆ ತಮ್ಮ ಪ್ರಭಾವ ಬೀರುತ್ತಾ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು 2005ರಲ್ಲಿ ಜೆಡಿಎಸ್ ನಿಂದ ಹೊರ ಬಿದ್ದಿದ್ದರು. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಸ್ಥಾನ ನೀಡಿದೆ. ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಅವಧಿಯಲ್ಲಿ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದವರನ್ನು ಅವರೇ ಪ್ರೋತ್ಸಾಹಿಸಿದರು ಎಂಬ ಆರೋಪಗಳೂ ಇವೆ. ಇನ್ನು ದೆಹಲಿಯಲ್ಲಿರುವ ನಮ್ಮ ನಾಯಕರು ಒಂದು ವರ್ಷದಿಂದ ಸಿದ್ದರಾಮಯ್ಯ ಅವರಿಗೆ ಸಮಯ ನೀಡಲಿಲ್ಲ. ಹೀಗಾಗಿ ಅವರು ತಮ್ಮ ಹಳೆಯ ತಂತ್ರಗಳನ್ನು ಆಶ್ರಯಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬುದು ಬಹಿರಂಗ ರಹಸ್ಯ. ಎರಡೂ ಪಾಳಯಗಳ ಶಾಸಕರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿದ್ದು, ಹೈಕಮಾಂಡ್  ಪ್ರತಿ ಬಾರಿಯೂ ಒಗ್ಗಟ್ಟಿನ ಮಂತ್ರ ಪಠಿಸುವಂತೆ ಸೂಚಿಸುತ್ತಾ ಬಂದಿದೆ. ಆದರೆ, ಇನ್ನು ಪಂಜಾಬ್‌ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ರಾಜ್ಯದ ನಾಯಕರು ಕಲಿಯಬೇಕಾಗಿದೆ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಅನಂತರ ಶಾಸಕರೇ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುವಂತಾಗಬೇಕು ಎಂಬ ಸಂದೇಶವನ್ನು ಹೈಕಮಾಂಡ್‌ ನೀಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಒತ್ತಡ ತಂತ್ರಗಳನ್ನು ಮುಂದುವರೆಸಿದರೆ ಅದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂಬುದನ್ನೂ ಕಾಂಗ್ರೆಸ್‌ನ ಸಾರ್ವಜನಿಕ ವೇದಿಕೆಯಲ್ಲೇ ಹೈಕಮಾಂಡ್‌ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

 

Share Post