Sumalatha; ಸುಮಲತಾಗೆ ಟಿಕೆಟ್ ಭರವಸೆ ಕೊಟ್ಟರಾ ಪ್ರಧಾನಿ ಮೋದಿ?
ನವದೆಹಲಿ; ಮಂಡ್ಯ ರಾಜಕಾರಣ ಪ್ರತಿದಿನವೂ ಒಂದು ಕುತೂಹಲಕ್ಕೆ ಕಾರಣವಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈ ಬೆನ್ನಲ್ಲೇ ಸಂಸದೆ ಸುಮಲತಾ ಅವರು ದೆಹಲಿಯಲ್ಲಿ ತಮ್ಮ ಲಾಬಿ ಶುರು ಮಾಡಿದ್ದಾರೆ. ನಿನ್ನೆಯಷ್ಟೇ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೀಗ ಸುಮಲತಾ ಅವರು ನೇರವಾಗಿ ಪ್ರಧಾನಿ ಮೋದಿಯವರನ್ನೇ ಭೇಟಿಯಾಗಿದ್ದಾರೆ.
ಇದನ್ನೂ ಓದಿ; Sumalatha; ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಲಾಬಿ ಶುರು; ವರಿಷ್ಠರ ಭೇಟಿಯಲ್ಲಿ ಆಶ್ವಾಸನೆ ಸಿಕ್ತಾ..?
ಟಿಕೆಟ್ ಸಿಗುವ ಭರವಸೆಯಲ್ಲಿರುವ ಸುಮಲತಾ
ನಿನ್ನೆ ಸಂತೋಷ್ ಹಾಗೂ ನಡ್ಡಾ ಅವರನ್ನು ಭೇಟಿಯಾಗಿದ್ದ ಸುಮಲತಾ ಅವರು ಇಂದು ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ ಎಂದು ಪ್ರಧಾನಿ ಮೋದಿಯವರು ಸುಮಲತಾಗೆ ಹೇಳಿದ್ದಾರಂತೆ. ಇದರಿಂದ ಸುಮಲತಾ ಅವರು ಫುಲ್ ಖುಷ್ ಆಗಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ನನಗೇ ಸಿಗುತ್ತೆ ಎಂಬ ಖುಷಿಯಲ್ಲಿದ್ದಾರೆ ಸುಮಲತಾ ಅವರು. ಒಟ್ಟಾಗಿ ಕೆಲಸ ಮುಂದುವರೆಸೋಣ ಎಂದರೆ ಗೆದ್ದು ಬನ್ನಿ, ಆಡಳಿತ ಮುಂದುವರೆಸೋಣ ಎಂಬರ್ಥದಲ್ಲಿ ಪ್ರಧಾನಿ ಹೇಳಿರಬಹುದು ಎಂಬ ಖುಷಿಯಲ್ಲಿ ಸುಮಲತಾ ಇದ್ದಾರೆ. ಟಿಕೆಟ್ ಸಿಗುವ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ; Congress VS bjp; ಬಿಜೆಪಿ ಶ್ವೇತ ಪತ್ರ, ಕಾಂಗ್ರೆಸ್ ಕಪ್ಪು ಪತ್ರ; ಏನಿದು ಜಟಾಪಟಿ?
ಮೋದಿಯನ್ನು ಹೊಗಳಿ ಸುಮಲತಾ ಪೋಸ್ಟ್;
`ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರಿಗೆ ನನ್ನ ಧನ್ಯವಾದಗಳು. ನರೇಂದ್ರ ಮೋದಿರವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.
ತಮ್ಮನ್ನು ಭೇಟಿ ಮಾಡಿದ ಸಂಧರ್ಭದಲ್ಲಿ, ತಾವು ನೀಡಿದ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ, ಮತ್ತು ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ. ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನಿಮಗೆ, ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಪರಿಕಲ್ಪನೆ ಹಾಗೂ ದೂರದೃಷ್ಟಿ ನಮ್ಮ ದೇಶದ ಎಲ್ಲಾ ಭವಿಷ್ಯದ ಮಹತ್ವಾಕಾಂಕ್ಷಿ ನಾಯಕರಿಗೆ ಮಾದರಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಅಚಲವಾದ ಧೃಢತೆಯಿಂದ ಅದ್ಭುತವಾದ ನಾಯಕತ್ವದ ಗುಣಗಳೊಂದಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ದೇಶಕ್ಕೆ ನೀಡಿದ ಆಡಳಿತವು ಭಾರತ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.
ಇದನ್ನೂ ಓದಿ; Mandya Politics; ಮಂಡ್ಯದಲ್ಲಿ ಮತ್ತೆ ಸುಮಲತಾ-ನಿಖಿಲ್ ಕುಮಾರಸ್ವಾಮಿ ಫೈಟ್..?
17ನೇ ಲೋಕಸಭೆಯ ಕೊನೆಯ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಈ ಬಾರಿಯ ತಮ್ಮ ಭೇಟಿ ಸಂದರ್ಭದಲ್ಲಿ “ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ” ಎಂಬ ನಿಮ್ಮ ಮಾತುಗಳು ನನಗೆ ಸ್ಪೂರ್ತಿದಾಯಕವಾಗಿದ್ದು, ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ.’ ಹೀಗಂತ ಸುಮಲತಾ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.