CHARAN SING; ವಕೀಲ ವೃತ್ತಿಯಿಂದ ಪ್ರಧಾನಿ ಹುದ್ದೆಯವರೆಗೆ!
ನವದೆಹಲಿ; ಮಾಜಿ ಪ್ರಧಾನಿ ಚರಣ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿದೆ. ದೇಶದ ಪ್ರಧಾನಿಯಾಗಿ, ಉಪ ಪ್ರಧಾನಿಯಾಗಿ, ಕೇಂದ್ರ ಸಚಿವರಾಗಿ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು, ಈ ಘೋಷಣೆ ಮಾಡಿದ್ದಾರೆ.
ಚೌಧರಿ ಚರಣ್ ಸಿಂಗ್ ಉತ್ತರ ಪ್ರದೇಶದವರು;
ಚರಣ್ ಸಿಂಗ್ (charan sing) ಅವರು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಜನಿಸಿದರು. ಮಧ್ಯಮ ವರ್ಗದ ರೈತಾಪಿ ಕುಟುಂಬವೊಂದರಲ್ಲಿ 1902ರಲ್ಲಿ ಜನಿಸಿದರು. ಅವರು 1923ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು, 1925ರಲ್ಲಿ ಆಗ್ರಾ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಕಾನೂನು ಶಿಕ್ಷಣವನ್ನು ಪಡೆದ ಅವರು ಗಾಝಿಯಾಬಾದ್‌ನಲ್ಲಿ ತಮ್ಮ ವಕೀಲಿಕೆ ಅಭ್ಯಾಸ ಪ್ರಾರಂಭಿಸಿದರು. ಬಳಿಕ 1929ರಲ್ಲಿ ಮೀರತ್‌ಗೆ ತೆರಳಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಹಲವು ಹುದ್ದೆಗಳನ್ನು ನಿಭಾಯಿಸಿದ್ದ ಚರಣ್ ಸಿಂಗ್;
ಚರಣ್ ಸಿಂಗ್ ಅವರು 1937ರಲ್ಲಿ ಉತ್ತರ ಪ್ರದೇಶದ ಛಪ್ರೌಲಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದರು. 1946, 1952, 1962 ಮತ್ತು 1967ರಲ್ಲಿ ಕೂಡಾ ಆ ಕ್ಷೇತ್ರವನ್ನು ಅವರೇ ಪ್ರತಿನಿಧಿಸಿದ್ದರು. 1946ರಲ್ಲಿ ಪಂಡಿತ್ ಗೋವಿಂದ್ ಭಲ್ಲಭ್ ಪಂತರ ಸರ್ಕಾರದಲ್ಲಿ ಅವರು ಸಂಸದೀಯ ಕಾರ್ಯದರ್ಶಿಯಾಗಿದ್ದರು. 1952ರಲ್ಲಿ ಸಂಪೂರ್ಣಾನಂದ ಅವರ ಮಂತ್ರಿಮಂಡಲದಲ್ಲಿ ಚರಣ್ ಸಿಂಗ್ ಅವರು ಕಂದಾಯ ಮತ್ತು ಕೃಷಿ ಸಚಿವರಾಗಿದ್ದರು. 1959ರಲ್ಲಿ ಅವರು ರಾಜೀನಾಮೆಯನ್ನು ನೀಡುವಾಗ ಚರಣ್ ಸಿಂಗ್ ಕಂದಾಯ ಮತ್ತು ಸಾರಿಗೆ ಸಚಿವರಾಗಿದ್ದರು.
ಎರಡು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು
ಕಾಂಗ್ರೆಸ್ ವಿಭಜನೆಗೊಂಡ ಬಳಿಕ ಫೆಬ್ರವರಿ 1970ರಲ್ಲಿ ಚರಣ್ ಸಿಂಗ್ ಅವರು ಎರಡನೆಯ ಬಾರಿಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದರು. ಅಕ್ಟೋಬರ್ 2, 1970ರಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತವನ್ನು ಘೊಷಿಸಲಾಯಿತು. ಚರಣ್ ಸಿಂಗ್ ಅವರು ಉತ್ತರ ಪ್ರದೇಶ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಸಾಮಥ್ರ್ಯವನ್ನು ಸಹಿಸದ ಒಬ್ಬ ಟಾಸ್ಕ್ ಮಾಸ್ಟರ್ ಎಂಬ ಖ್ಯಾತಿಯನ್ನು ಪಡೆದರು.