Politics

ಶೋಭಾಗೂ ಸಿಗುತ್ತೆ ಟಿಕೆಟ್‌, ನಮಗೆ ಯಾಕಿಲ್ಲ; ಬಿಎಸ್‌ವೈಗೆ ಈಶ್ವರಪ್ಪ ಪ್ರಶ್ನೆ

ಬೆಂಗಳೂರು; ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಪುತ್ರನಿಗಾಗಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೇಳಿದ್ದರು. ಆದ್ರೆ, ಈಶ್ವರಪ್ಪ ಪುತ್ರನಿಗೆ ಬದಲಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಹಾವೇರಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇದರಿಂದ ಕೆರಳಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾತನಾಡಿರುವ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಕೊಡಬಾರದು ಎಂದು ಅಲ್ಲಿನ ಜನ ಗೋಬ್ಯಾಕ್‌ ಶೋಭಾ ಅಭಿಯಾನ ಮಾಡಿದ್ದರು. ಜನ ತಿರಸ್ಕರಿದ್ದ ಶೋಭಾ ಕರಂದ್ಲಾಜೆ ಅವರನ್ನು ಯಡಿಯೂರಪ್ಪ ಅವರೇ ಕರೆತಂದು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆಗಾಗಿ ಸದಾನಂದಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ತಪ್ಪಿಸಲಾಗಿದೆ. ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಗಾಗಿ ನಮ್ಮ ಮಗ ಕಾಂತೇಶ್‌ಗೆ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಜನರಿಗೆ ಬೇಡವಾದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಕೊಡಿಸೋದಕ್ಕೆ ಯಡಿಯೂರಪ್ಪ ಹಾಗೂ ಅವರ ಮಕ್ಕಳಿಗೆ ಆಗುತ್ತದೆ. ಆದ್ರೆ ನಾನು 40 ವರ್ಷದಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಯಡಿಯೂರಪ್ಪ ಅವರಿಗೆ ಸರಿಸಮನಾಗಿ ಕೆಲಸ ಮಾಡಿದ್ದೇನೆ. ಆದರೂ ನನಗೆ ಮೋಸ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡದಂತೆ ತಪ್ಪಿಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮಗ ಕಾಂತೇಶ್‌ಗೆ ಟಿಕೆಟ್‌ ಕೊಡಿಸುತ್ತೇವೆ ಎಂದು ಹೇಳಿದ್ದರು. ಹೀಗಾಗಿ ನನ್ನ ಮಗ ಕಾಂತೇಶ್‌ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಆದ್ರೆ ಈಗ ಬೇಕಂತಲೇ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಈ ಮೂಲಕ ನನಗೆ ಯಡಿಯೂರಪ್ಪ ಕುಟುಂಬ ಅನ್ಯಾಯ ಮಾಡಿದೆ. ಹೀಗಾಗಿ ನಾಳೆ ಸಂಜೆ ಐದು ಗಂಟೆಗೆ ಶಿವಮೊಗ್ಗದಲ್ಲಿ ನನ್ನ ಬೆಂಬಲಿಗರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಬೆಂಬಲಿಗರು ಏನು ಹೇಳುತ್ತಾರೋ ಕೇಳಿ ಅನಂತರ ತೀರ್ಮಾನ ಮಾಡುತ್ತೇನೆ ಎಂದು ಈಶ್ವರಪ್ಪ ಕೇಳಿದ್ದಾರೆ.

ಈಶ್ವರಪ್ಪ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಣೆ ಮಾಡಲಾಗಿತ್ತು. ಪುತ್ರನಿಗೆ ಟಿಕೆಟ್‌ ಕೊಡಿ ಎಂದರೂ ಕೊಟ್ಟಿರಲಿಲ್ಲ.. ಈಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಇನ್ನು ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಕೇಸ್‌ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ತೆಗೆಯಲಾಗಿತ್ತು. ಅನಂತರ ಕೋರ್ಟ್‌ನಲ್ಲಿ ಈಶ್ವರಪ್ಪಗೆ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಆದರೂ ಈಶ್ವರಪ್ಪ ಅವರನ್ನು ವಾಪಸ್‌ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಇದರಿಂದ ಈಶ್ವರಪ್ಪ ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದ್ದಾರೆ. ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.

Share Post