ಶಕ್ತಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ; ಏನಿದ್ದರೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು..?
ಬೆಂಗಳೂರು; ರಾಜ್ಯ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಅದರಲ್ಲಿ ಶಕ್ತಿ ಯೋಜನೆ ಕೂಡಾ ಒಂದು. ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರೂ ಸರ್ಕಾರಿ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣ ಮಾಡಬಹುದು. ಜೂನ್ 11ರಿಂದ ಈ ಯೋಜನೆ ಜಾರಿಗೆ ಬರಲಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲೂ ಉಚಿತ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
6 ರಿಂದ 12 ವರ್ಷದವರೆಗಿನ ಬಾಲಕಿಯರು, ಲಿಂಗತ್ವ ಅಲ್ಪಅಸಂಖ್ಯಾತರು ಕೂಡಾ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸಾರಿಗೆಗಳಲ್ಲಿ ರಾಜ್ಯಾದ್ಯಂತ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಆದರೆ ಐಶಾರಾಮಿ ಬಸ್‌ಗಳಲ್ಲಿ ಹಣ ಪಾವತಿಸಿಯೇ ಪ್ರಯಾಣ ಮಾಡಬೇಕಾಗುತ್ತದೆ.
ಶಕ್ತಿ ಯೋಜನೆಯಲ್ಲಿ ಸರ್ಕಾರದ ಮಾರ್ಗಸೂಚಿ ಏನು..?
– ವಿದ್ಯಾರ್ಥಿನಿಯರು ಸೇರಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಅವಕಾಶ
– ಸ್ಮಾರ್ಟ್ಕಾರ್ಡ್ ವಿತರಣೆಯಾಗುವವರೆಗೂ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಬಹುದು
– ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ ತೋರಿಸಬಹುದು
– ಸರ್ಕಾರದ ಅಂಗವಿಕಲರ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ ಕೂಡಾ ಪರಿಗಣಿಸಲಾಗುತ್ತದೆ
– ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಫ್ಲೈಬಸ್ಗಳಲ್ಲಿ ಉಚಿತವಿಲ್ಲ
– ಉಚಿತ ಪ್ರಯಾಣಕ್ಕೆ ದೂರದ ಯಾವುದೇ ಮಿತಿಯಿಲ್ಲ, ಆದ್ರೆ ಕರ್ನಾಟಕದೊಳಗೆ ಮಾತ್ರ ಪ್ರಯಾಣಿಸಬಹುದು
– ಅಂತಾರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ
– ನಿಗದಿಗಿಂತ ಹೆಚ್ಚಿನ ಪ್ರಮಾಣದ ಲಗೇಜ್ ತಂದರೆ ಟಿಕೆಟ್ ಪಡೆಯಬೇಕು
– ಸೇವಾ ಸಿಂಧು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ಕಾರ್ಡ್ ಪಡೆಯಬೇಕು