ಇಂದು ರಾಜ್ಯಸಭಾ ಚುನಾವಣೆ; ಮೂರೂ ಪಕ್ಷಗಳಿಗೆ ʻಅಡ್ಡʼ ಆತಂಕ!
ಬೆಂಗಳೂರು; ರಾಜ್ಯ ಶಾಸನಸಭೆಯಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಐದು ಮಂದಿ ಕಣದಲ್ಲಿರುವುದರಿಂದ ಚುನಾವಣೆ ಕುತೂಹಲದ ಘಟ್ಟಕ್ಕೆ ತಲುಪಿದೆ. ನಿನ್ನೆ ಕೊನೆ ಹಂತದ ತಂತ್ರಗಾರಿಕೆ ಎಲ್ಲಾ ಪಕ್ಷಗಳಿಂದ ನಡೆದಿದೆ. ಇನ್ನು ಇಂದು ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆಯತನಕ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕುಪೇಂದ್ರ ರೆಡ್ಡಿ ಗೆಲುವಿಗಾಗಿ ಜೆಡಿಎಸ್-ಬಿಜೆಪಿ ಸರ್ಕಸ್;
ಕುಪೇಂದ್ರ ರೆಡ್ಡಿ ಗೆಲುವಿಗಾಗಿ ಜೆಡಿಎಸ್-ಬಿಜೆಪಿ ಸರ್ಕಸ್; ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಮೂರು ಸ್ಥಾನಗಳು ಗೆಲ್ಲುವಷ್ಟು ಬಲ ಕಾಂಗ್ರೆಸ್ ಹೊಂದಿದೆ. ಹೀಗಾಗಿ, ಕಾಂಗ್ರೆಸ್ ಅಜಯ್ ಮಾಕೇನ್, ಜಿ.ಸಿ.ಚಂದ್ರಶೇಖರ್, ಡಾ.ಸೈಯದ್ ನಾಸೀರ್ ಹುಸೇನ್ ಅವರನ್ನು ಕಣಕ್ಕಿಳಿಸಿದೆ. ಇನ್ನು ಬಿಜೆಪಿಯಿಂದ ಒಬ್ಬರ ಗೆಲುವಿಗೆ ಅವಕಾಶವಿದ್ದು ಬಿಜೆಪಿ ಕೂಡಾ ನಾರಾಯಣಸಾ ಬಾಂಡಗೆ ಅವರನ್ನು ಅಖಾಡಕ್ಕಿಳಿಸಿದೆ. ಇನ್ನು ಬಿಜೆಪಿ ಅಭ್ಯರ್ಥಿಗೆ ಬೇಕಾದ ಮತಗಳು ಚಲಾವಣೆಯಾದ ಮೇಲೂ ಬಿಜೆಪಿಯ 21 ಮತಗಳು ಉಳಿಯಲಿವೆ. ಇನ್ನು ಜೆಡಿಎಸ್‌ನ 19 ಶಾಸಕರಿದ್ದಾರೆ. ಹೀಗಾಗಿ, ಉಳಿದ ಐದು ಮತಗಳನ್ನು ಪಕ್ಷೇತರರಿಂದ ಪಡೆದು ಗೆಲ್ಲಲು ಜೆಡಿಎಸ್, ಬಿಜೆಪಿ ಪ್ಲ್ಯಾನ್ ಮಾಡಲಾಗಿದೆ. ಹೀಗಾಗಿ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಲಾಗಿದೆ.
ಮೂರೂ ಪಕ್ಷಗಳಿಂದ ರಣತಂತ್ರ;
ಮೂರೂ ಪಕ್ಷಗಳಿಂದ ರಣತಂತ್ರ; ಮೂರು ಅಭ್ಯರ್ಥಿಗಳು ಗೆಲ್ಲುವಷ್ಟು ಮತಗಳು ಕಾಂಗ್ರೆಸ್‌ಗೆ ಇದ್ದವು. ಆದ್ರೆ, ರಾಜಾ ವೆಂಂಕಟಪ್ಪ ನಾಯಕ ಅವರ ನಿಧನದಿಂದಾಗಿ ಕಾಂಗ್ರೆಸ್‌ಗೆ ಒಂದು ಮತ ಕಡಿಮೆಯಾಗಿದೆ. ಹೀಗಾಗಿ, ಪಕ್ಷೇತರರ ಮತ ಪಡೆದರೆ ಕಾಂಗ್ರೆಸ್ ಗೆಲ್ಲುತ್ತದೆ. ಇನ್ನೊಂದೆಡೆ ಯಾರಾದರೂ ಕಾಂಗ್ರೆಸ್‌ನ ಶಾಸಕರು ಅಡ್ಡಮತದಾನ ಮಾಡಿದರೂ ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ. ಕಾಂಗ್ರೆಸ್ ಶಾಸಕರಿಂದ ಅಡ್ಡ ಮತದಾನ ಮಾಡಿಸೋದಕ್ಕಾಗಿಯೇ ಜೆಡಿಎಸ್-ಬಿಜೆಪಿ ತಂತ್ರಗಾರಿಕೆ ಮಾಡಿದ್ದವು. ಇತ್ತು ಕಾಂಗ್ರೆಸ್ ನಾಯಕರು ಕೂಡಾ ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಕೆಆರ್‌ಪಿಪಿ ಪಕ್ಷದ ನಾಯಕ ಜನಾರ್ದನರೆಡ್ಡಿಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.
ಇನ್ನು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಚುನಾವಣಾ ಏಜೆಂಟ್ ಆಗಿದ್ದಾರೆ. ಕೆಆರ್‌ಪಿಪಿ ಪಕ್ಷಕ್ಕೆ ತಮ್ಮ ಶಿಷ್ಯರನ್ನೇ ಏಜೆಂಟರನ್ನಾಗಿ ನೇಮಿಸಲಾಗಿದೆ. ಇನ್ನು ಮೂರೂ ಪಕ್ಷಗಳಿಂದ ರಾತ್ರಿಯೇ ಶಾಸಕಾಂಗ ಪಕ್ಷದ ಸಭೆಗಳು ನಡೆದಿವೆ. ಕೊನೆಗೆ ಹಂತದ ಟ್ರೈನಿಂಗ್ ನೀಡಲಾಗಿದೆ. ಜೆಡಿಎಸ್‌ನ ಶರಣಗೌಡ ಕಂದಕೂರು ಅವರ ಮನವೊಲಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ನಡೆ ಇನ್ನೂ ನಿಗೂಢವಾಗಿದ್ದು, ಬಿಜೆಪಿ ನಾಯಕರಿಗೆ ಗೊಂದಲ ಮೂಡಿಸಿದೆ.