ಕಾಂಗ್ರೆಸ್ ಗೆ ಕೆಲವೆಡೆ ಅಭ್ಯರ್ಥಿಗಳಿಲ್ಲ; ಇದ್ದರೂ ಗೆಲ್ಲೋ ವಿಶ್ವಾಸವಿಲ್ಲ!
ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ ಇದೆ.. ಆದ್ರೆ ಕಾಂಗ್ರೆಸ್ ನಾಯಕರಿಗೆ ಪ್ರಾಣ ಸಂಕಟ ಶುರುವಾಗಿದೆ.. ಕೆಲವು ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಯೇ ಸಿಗುತ್ತಿಲ್ಲ.. ಕೆಲ ಕ್ಷೇತ್ರಗಲ್ಲಿ ಬಂಡಾಯ, ಗುಂಪುಗಾರಿಕೆಯ ಭೀತಿ ಶುರುವಾಗಿದೆ.
ಬೆಂಗಳೂರಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ;
ಬೆಂಗಳೂರು ನಗರದಲ್ಲಿ ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮೂರು ಲೋಕಸಭಾ ಕ್ಷೇತ್ರಗಳಿವೆ. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸೂಕ್ತ ಅಭ್ಯರ್ಥಿ ಇಲ್ಲ. ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮುಂತಾದವರನ್ನು ಅಖಡಕ್ಕಿಳಿಸಲು ನಾಯಕರು ಪ್ರಯತ್ನಿಸಿದರು. ಆದರೆ ಸಚಿವರು ಬಿಲ್ ಕುಲ್ ಒಪ್ಪುತ್ತಿಲ್ಲ.. ಬೇರೆಯವರು ಸಿಗುತ್ತಿಲ್ಲ.. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತಲೆಬಿಸಿ ಶುರುವಾಗಿದೆ.
ನಲಪಾಡ್ ಗೆ ಸಿಗುತ್ತಾ ಕೇಂದ್ರ ಕ್ಷೇತ್ರದ ಟಿಕೆಟ್?;
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಟಿಕೆಟ್ ಕೇಳುತ್ತಿದ್ದಾರೆ. ಮನ್ಸೂರ್ ಖಾನ್ ಹೆಸರು ಕೂಡಾ ಚಾಲ್ತಿಯಲ್ಲಿದೆ. ಆದ್ರೆ ಇವರಿಗೆ ಟಿಕೆಟ್ ಕೊಟ್ಟರೆ ಗೆಲ್ಲೋದು ಕಷ್ಟ ಎಂಬ ಅಭಿಪ್ರಾಯವಿದೆ. ಹೀಗಾಗಿ ಬೇರೆಯವರನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ, ರಾಜೀವ್ ಗೌಡ ಟಿಕೆಟ್ ಬಯಸಿದ್ದಾರೆ. ಆದ್ರೆ ಸಮೀಕ್ಷೆಯಲ್ಲಿ ಇವರ ಪರವಾದ ವಾತಾವರಣ ಇಲ್ಲ. ಹೀಗಾಗಿ ಬೇರೆಯವರನ್ನು ಹುಡುಕುತ್ತಿದ್ದಾರೆ. ಸಿಎಂ ಸ್ವಕ್ಷೇತ್ರ ಮೈಸೂರಿನಲ್ಲೂ ಅಭ್ಯರ್ಥಿಗಳಿಲ್ಲ. ಸಿಎಂ ಪುತ್ರ ಯತೀಂದ್ರ ಬೇಡ ಎಂದು ತೀರ್ಮಾನಿಸಲಾಗಿದೆ. ಇನ್ನು ಲಕ್ಷ್ಮಣ್ ಹೆಸರು ಕೇಳಿಬರುತ್ತಿದ್ದರೂ, ಅವರಿಗೂ ಗೆಲ್ಲೋ ಶಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ.
ಐದಾರು ಕ್ಷೇತ್ರ ಸೂಕ್ತ ಅಭ್ಯರ್ಥಿಯ ಕೊರತೆ;
ಕಾಂಗ್ರೆಸ್ ಗೆ ರಾಜಧಾನಿ ಬೆಂಗಳೂರಿನ ಮೂರು ಕ್ಷೇತ್ರ ಸೇರಿ ಐದಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಗೆಲ್ಲುವ ಅಥವಾ ನೆಕ್‌ಟು ನೆಕ್ ಫೈಟ್ ಕೊಡುವ ಅಭ್ಯರ್ಥಿಯಾದರೂ ಬೇಕು.. ಸಚಿವರು ನಿಂತಿದ್ದರೆ ಅದು ಸಾಧ್ಯವಾಗುತ್ತಿತ್ತು. ಆದ್ರೆ ಹಲವು ಸಚಿವರು ಸ್ಪರ್ಧಿಸೋಕೆ ಒಲ್ಲೆ ಎನ್ನುತ್ತಿದ್ದಾರೆ.
ಕೆಲ ಕ್ಷೇತ್ರಗಳಲ್ಲಿ ಬಂಡಾಯದ ಭೀತಿ;
ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿಗಳಿದ್ದಾರೆ. ಕೆಲ ಕ್ಷೇತ್ರ ಇಬ್ಬರು ಮೂವರು ಅಭ್ಯರ್ಥಿಗಳಿದ್ದಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಮತ್ತೊಬ್ಬರಿಗೆ ಕೋಪ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಪ್ರಾಣ ಸಂಕಟ ಶುರುವಾಗಿದೆ. ಬೆಳಗಾವಿಯಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಸತೀಶ್ ಜಾರಕಿಹೊಳಿ ನಡುವೆ ಸಮರ ಶುರುವಾಗಿದೆ.. ಇಬ್ಬರೂ ಬೇರೆ ಬೇರೆ ಹೆಸರು ಸೂಚಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲಿ ಕಾಂಗ್ರೆಸ್ ಗೆ ಗೆಲ್ಲೋ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದೆ.
ನಾಳೆ ದೆಹಲಿಗೆ ಸಿಎಂ, ಡಿಸಿಎಂ;
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಅಷ್ಟರೊಳಗೆ ಬೆಂಗಳೂರಿನ ಮೂರ ಕ್ಷೇತ್ರಕ್ಕೂ ಹೈಕಮಾಂಡ್ ಒಪ್ಪುವ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಾಗಿದೆ.