CrimePolitics

ವಿಧಾನಸೌಧ ಕಟ್ಟುವಾಗ ನಡೆದಿತ್ತಂತೆ ಕೆಂಗಲ್‌ ಹನುಮಂತಯ್ಯ ಕೊಲೆ ಯತ್ನ!

ಕೆಂಗಲ್‌ ಹನುಮಂತಯ್ಯ ಬಹುದೊಡ್ಡ ಕನಸು ಕಾಣದೇ ಹೋಗಿದ್ದರೆ ಭವ್ಯವಾದ ವಿಧಾನಸೌಧ ನಿರ್ಮಾಣವಾಗುತ್ತಲೇ ಇರಲಿಲ್ಲ. ರಾಜ್ಯ ಆಡಳಿತದ ಶಕ್ತಿಸೌಧ ೨೦ನೇ ಶತಮಾನದ ಭವ್ಯಸೌಧವಾಗಬೇಕು ಎಂದು ಕೆಂಗಲ್‌ ಹನುಮಂತಯ್ಯ ಕನಸು ಕಂಡಿತ್ತು. ಅಂದುಕೊಂಡಂತೆ ಅದನ್ನು ನನಸು ಮಾಡಿದರು ಕೂಡಾ. ಆದರೆ, ಅವರೇ ಕಟ್ಟಿಸಿದ ವಿಧಾನಸೌಧದಲ್ಲಿ ಕೆಂಗಲ್‌ ಹನುಮಂತಯ್ಯನವರು ಒಂದು ದಿನವೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿಲ್ಲ. ಅಷ್ಟೇ ಏಕೆ, ವಿಧಾನಸೌಧ ಕಟ್ಟುವಾಗ ಕಾಮಗಾರಿಯ ಸ್ಥಳದಲ್ಲೇ ಕೆಂಗಲ್‌ ಹನುಮಂತಯ್ಯನವರ ಮೇಲೆ ಕೊಲೆ ಯತ್ನ ನಡೆದಿತ್ತಂತೆ. ರಾಜ್ಯದ ಬಹುತೇಕರಿಗೆ ತಿಳಿಯದೇ ಉಳಿದ ಈ ಆಘಾತಕಾರಿ ಅಂಶವನ್ನು ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರ ಆತ್ಮಕಥೆಯಲ್ಲಿ ಉಲ್ಲೇಖಿಸಲಾಗಿದೆ.
೧೯೫೨ರಲ್ಲಿ ವಿಧಾನಸೌಧ ಕಾಮಗಾರಿ ಶುರುವಾಯ್ತು. ಈ ಕಾಮಗಾರಿಗೆ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 5,000 ಕೈದಿಗಳು ಮತ್ತು 1,500 ಕುಶಲಕರ್ಮಿಗಳನ್ನು ಬಳಸಿಕೊಳ್ಳಲಾಗಿತ್ತು.. ಭವ್ಯ ಕನಸಿನೊಂದಿಗೆ ಬೃಹತ್‌ ಸೌಧ ಕಟ್ಟಲು ಶುರು ಮಾಡಿದ್ದ ಕೆಂಗಲ್‌ ಹನುಮಂತಯ್ಯನವರು ದಿನವೂ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದರು. ಆಗಿನ ರಾಜ್ಯದ ಆಡಳಿತ ಕೇಂದ್ರವಾಗಿದ್ದ ಅಟಾರ ಕಚೇರಿ, ಅಂದರೆ ಈಗಿನ ಹೈಕೋರ್ಟ್‌ನಿಂದ ಪ್ರತಿದಿನ ವಿಧಾನಸೌಧ ನಿರ್ಮಾಣದ ಕಾಮಗಾರಿ ಪ್ರಗತಿ ವೀಕ್ಷಿಸಲು ಕೆಂಗಲ್‌ ಹನುಮಂತಯ್ಯ ಬರುತ್ತಿದ್ದರು. ಒಂದು ಕಡೆಯಿಂದ ಮುಖ್ಯಮಂತ್ರಿ ಕೆಂಗಲ್‌ ಹೋಗುತ್ತಿದ್ದರೆ, ಇನ್ನೊಂದು ಕಡೆಯಿಂದ ಪತ್ರಕರ್ತರೂ ವೀಕ್ಷಣೆಗೆ ಹೋಗುತ್ತಿದ್ದರು.
ವಿಧಾನಸೌಧ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ನಡೆಯುತ್ತಿತ್ತು. ಅದಕ್ಕೆ ಮಾಣಿಕ್ಯಂ ಅವರು ವಾಸ್ತುಶಿಲ್ಪಿಯಾಗಿ ಮತ್ತು ಮುನಿಯಪ್ಪ ಮುಖ್ಯ ವಿಶೇಷ ಎಂಜಿನಿಯರ್ ಆಗಿ ನೇಮಕವಾಗಿದ್ದರು. ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಕಡಿದಾಳ್‌ ಮಂಜಪ್ಪ ಅವರು, ಅತ್ಯಂತ ಜವಾಬ್ದಾರಿಯಿಂದ ಕಾಮಗಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹೀಗಿದ್ದರೂ ಆಗಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರು, ವಿಧಾನಸೌಧ ನಿರ್ಮಾಣದ ಪ್ರತಿ ಹಂತದಲ್ಲೂ ಪರಿವೀಕ್ಷಣೆ ಮಾಡುತ್ತಿದ್ದರು. ಹೀಗೇ ಒಂದು ದಿನ ಕಾಮಗಾರಿ ಪರಿವೀಕ್ಷಣೆ ಮಾಡಲು ಬಂದಾಗ ಕೆಂಗಲ್‌ ಹನುಮಂತಯ್ಯನವರ ಮೇಲೆ ಕೊಲೆ ಯತ್ನ ನಡೆದುಬಿಡುತ್ತದೆ. ಆದರೆ ಕೆಂಗಲ್‌ ಹನುಮಂತಯ್ಯ ಅದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಿದ ಕಾರಣ, ಈ ಘಟನೆ ಹೆಚ್ಚು ಪ್ರಚಾರ ಪಡೆದುಕೊಳ್ಳುವುದಿಲ್ಲ.
ನಿಜವಾಗಲೂ ಅಂದು ನಡೆದಿದ್ದೇನು..?
ಅದು 1953ರ ಸಮಯ. ಆಗ ವಿಧಾನಸೌಧದ ಮೊದಲ ಮಹಡಿಯ ಕಾಮಗಾರಿ ನಡೆಯುತ್ತಿರುತ್ತದೆ. ಎಂದಿನಂತೆ ಒಂದು ದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅಠಾರ ಕಚೇರಿಯಿಂದ ವಿಧಾನಸೌಧದ ಕಾಮಗಾರಿ ಸ್ಥಳಕ್ಕೆ ಹೋಗಲು ತೀರ್ಮಾನಿಸುತ್ತಾರೆ. ಆಗ ಅವರು ಮೊದಲ ಭೇಟಿ ನೀಡೋದು ಆಗಿನ ಲೋಕೋಪಯೋಗಿ ಸಚಿವರಾಗಿದ್ದ ಕಡಿದಾಳ್‌ ಮಂಜಪ್ಪ ಅವರ ಮನೆಗೆ. ಕಡಿದಾಳ್‌ ಮಂಜಪ್ಪರನ್ನು ಕಾಮಗಾರಿ ಸ್ಥಳಕ್ಕೆ ತಮ್ಮ ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ. ಇಬ್ಬರು ಎಂಜಿನಿಯರ್‌ಗಳೊಂದಿಗೆ ಸೇರಿ ಕೆಂಗಲ್ ಹನುಮಂತಯ್ಯ ಕಟ್ಟಡದ ಒಳಗೆ ಹೋಗಿ ನಿರ್ಮಾಣ ಕಾರ್ಯ ನೋಡುತ್ತಿರುತ್ತಾರೆ. ಹನುಮಂತಯ್ಯ ಎಲ್ಲರಿಗಿಂತ ಮುಂದೆ ಇರುತ್ತಾರೆ. ಮಂಜಪ್ಪ ಅವರಿಗಿಂತ ತುಸು ಹಿಂದೆ ನಡೆಯುತ್ತಿರುತ್ತಾರೆ. ಆಗ ಅಲ್ಲಿ ಕಾಮಗಾರಿ ಕೆಲಸದಲ್ಲಿ ಪಾಲ್ಗೊಂಡಿದ್ದ ಖೈದಿಯೊಬ್ಬ ಒಮ್ಮೆಲೆ ಕೆಂಗಲ್‌ ಹನುಮಂತಯ್ಯನವರ ಕಡೆ ನುಗುತ್ತಾನೆ. ತನ್ನ ಬಲಗೈಯಿಂದ ಕೆಂಗಲ್‌ ಹನುಮಂತಯ್ಯನವರ ತಲೆಗೆ ಹೊಡೆದುಬಿಡುತ್ತಾನೆ. ನಂತರ ಆ ಖೈದಿ ಅಲ್ಲಿಯೇ ಇದ್ದ ಕಬ್ಬಿಣದ ರಾಡೊಂದನ್ನು ಎತ್ತಿಕೊಂಡು ಕೆಂಗಲ್‌ ಹನುಮಂತಯ್ಯ ಅವರ ತಲೆಗೆ ಹೊಡೆಯಲು ಮುಂದಾಗುತ್ತಾನೆ. ಇನ್ನೇನು ಕಬ್ಬಿಣದ ರಾಡು ಕೆಂಗಲ್‌ ಹನುಮಂತಯ್ಯ ಅವರ ತಲೆಗೆ ಬಡಿಯಬೇಕು ಅನ್ನುವಷ್ಟರಲ್ಲಿ ಸ್ಥಳದಲ್ಲಿದ್ದ ಚಿಕ್ಕಬಳ್ಳಾಪುರದ ಚಿಕ್ಕಪುಟ್ಟಸ್ವಾಮಿ ಎಂಬುವವರು ನೆರವಿಗೆ ಧಾವಿಸುತ್ತಾರೆ. ಕಟ್ಟುಮಸ್ತಾಗಿದ್ದ ಚಿಕ್ಕಪುಟ್ಟಸ್ವಾಮಿ, ಹಿಂದಿನಿಂದ ಬಂದು ಆ ಖೈದಿಯನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಳ್ಳುತ್ತಾರೆ. ನಂತರ ಆತನ ಕೈಯಲ್ಲಿದ್ದ ರಾಡು ಕಸಿದುಕೊಳ್ಳುತ್ತಾನೆ. ಚಿಕ್ಕ ಪುಟ್ಟಸ್ವಾಮಿ ಅಂದು ಸಮಯ ಪ್ರಜ್ಞೆ ಮೆರೆದು ನೆರವಿಗೆ ಧಾವಿಸಿದ್ದರಿಂದಾಗಿ ನಡೆಯುತ್ತಿದ್ದ ಭಾರಿ ಅನಾಹುತ ತಪ್ಪಿದಂತಾಗುತ್ತದೆ.
ಸ್ಥಂಭೀಭೂತರಾಗಿ ನಿಂತಿದ್ದರಂತೆ ಕಡಿದಾಳ್‌ ಮಂಜಪ್ಪ..!
ಈ ಘಟನೆಯನ್ನು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿರುವ ಕಡಿದಾಳ್ ಮಂಜಪ್ಪನವರು ಹೇಳಿರೋದಿಷ್ಟು; ʻನಾನಂತೂ ಆ ಅನಿರೀಕ್ಷಿತ ಘಟನೆಯಿಂದ ಸ್ಥಂಭೀಭೂತನಾಗಿ ಮೂಕಪ್ರೇಕ್ಷಕನಾಗಿದ್ದೆ. ಹನುಮಂತಯ್ಯನವರ ಜೊತೆಗಿದ್ದ ಎಂಜಿನಿಯರ್‌ಗಳೂ ಹಾಗೇ ಇದ್ದರು. ಕೆಳಗಡೆ ಕಬ್ಬಿಣದ ಸರಳುಗಳೂ ಮತ್ತು ಸಲಾಖೆಗಳೂ ಯಥೇಚ್ಛವಾಗಿ ಬಿದ್ದಿದ್ದವು. ಅವುಗಳ ಪೈಕಿ ಯಾವುದಾದರೊಂದನ್ನು ಕೈಗೆತ್ತಿಕೊಂಡು ಹನುಮಂತಯ್ಯನವರ ಜೊತೆಗಿದ್ದ ಎಂಜಿನಿಯರಾಗಲೀ, ನಾನಾಗಲೀ ಅವನ ತಲೆಯ ಮೇಲೆ ಹೊಡೆಯಬಹುದಾಗಿತ್ತೆಂಬ ಯೋಚನೆ ಆಮೇಲೆ ಹೊಳೆಯಿತು. ಆದರೆ ಮಿಂಚಿನ ವೇಗದಲ್ಲಿ ನಡೆದ ಕೃತ್ಯ ನಡೆದದ್ದರಿಂದ ಯೋಚಿಸುವಷ್ಟು ಸಮಯವೂ ಇರಲಿಲ್ಲ.”
ಈ ಘಟನೆಯ ನಂತರ ಗಾಂಧಿವಾದಿಯಾಗಿದ್ದ ಕಡಿದಾಳ್ ಮಂಜಪ್ಪ ಕೂಡ ಆತ್ಮರಕ್ಷಣೆಗಾಗಿ ರಿವಲ್ವಾರ್ ಇಟ್ಟುಕೊಳ್ಳಲು ತೀರ್ಮಾನಿಸುತ್ತಾರೆ. ಅಧಿಕಾರಿಗಳಿಂದ ಲೈಸೆನ್ಸ್‌ ಪಡೆದು ಅಂದಿನಿಂದ ತಮ್ಮ ಬಳಿ ರಿವಾಲ್ವಾರ್‌ ಇಟ್ಟುಕೊಳ್ಳಲು ಶುರು ಮಾಡುತ್ತಾರೆ. ಹೀಗಾಗಿ ನಾನು ಅಹಿಂಸಾವಾದಿ ಎಂದು ಹೇಳಿಕೊಳ್ಳಲಾರೆ ಎಂದು ಹೇಳಿಕೊಂಡಿದ್ದಾರೆ ಕಡಿದಾಳ್‌ ಮಂಜಪ್ಪ.

Share Post