DistrictsPolitics

ಕಾಂಗ್ರೆಸ್ ನವರು ನಮ್ಮ ನೀರು ತಮಿಳುನಾಡು ಹಕ್ಕು ಎನ್ನುತ್ತಿದ್ದಾರೆ; ಹೆಚ್ಡಿಕೆ

ಮೈಸೂರು; ನಮ್ಮ ನೀರು ನಮ್ಮ ಹಕ್ಕು ಎಂದು ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿದ ಕಾಂಗ್ರೆಸ್ಸಿಗರು ಈಗ ನಮ್ಮ ನೀರು ತಮಿಳುನಾಡಿನ ಹಕ್ಕು ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ಮೈಸೂರಿನಲ್ಲಿ ಇಂದು ಸುತ್ತೂರು ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದಕೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಯಾರನ್ನೂ ಕೇಳದೆ, ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತೀರಾ ನೀರು ಬಿಟ್ಟ ಮೇಲೆ ಪ್ರತಿಪಕ್ಷಗಳಿಂದ, ಜನತೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಊರೆಲ್ಲ ಕೊಳ್ಳೆ ಹೋದ ಮೇಲೆ ದೊಡ್ಡಿ ಬಾಗಿಲು ಹಾಕಿಕೊಂಡರು ಎನ್ನುವಂತೆ ಈಗ ಸರಕಾರ ಸರ್ವಪಕ್ಷ ಸಭೆ, ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕುತ್ತೇವೆ ಎಂದು ರಾಗಾ ತೆಗೆಯುತ್ತಿದೆ. ನೀರು ಬಿಡುವುದಕ್ಕೆ ಮುನ್ನವೇ ಇದನ್ನು ಮಾಡಬಹುದಿತ್ತು ಅಲ್ಲವೇ? ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ನೀರಿಗೆ ಹಾಹಾಕಾರವಿದೆ. ಕಾವೇರಿ, ಕಬಿನಿ, ಹಾರಂಗಿ ಸೇರಿದಂತೆ ಯಾವುದೇ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿಲ್ಲ. ಇದು ಗೊತ್ತಿದ್ದರೂ ರಾಜ್ಯ ಸರಕಾರ ತಪ್ಪು ಮಾಡಿದೆ. ಕನ್ನಡಿಗರನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ನೀರಿಲ್ಲದ ಸಮಯದಲ್ಲಿ ಎರಡೂ ರಾಜ್ಯಗಳು ಸಂಕಷ್ಟ ಸೂತ್ರ ಪಾಲಿಸಬೇಕು ಎಂದು ಕಾವೇರಿ ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಆದರೆ, ಸರಕಾರ ಈ ಬಗ್ಗೆ ಆಲೋಚನೆಯನ್ನೇ ಮಾಡದೆ ನೀರು ಹರಿಸಿದೆ. ಈಗ ಸರ್ವಪಕ್ಷ ಸಭೆ ಕರೆದು, ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದರೆ ಏನು ಪ್ರಯೋಜನ? ಎಂದು ಅವರು ಪ್ರಶ್ನಿಸಿದರು.

ನಮ್ಮ ಔದಾರ್ಯಕ್ಕೆ ಬೆಲೆ ಇಲ್ಲ. ತಮಿಳುನಾಡಿನಲ್ಲಿ ಕುರುವೈ ಬೆಳೆಯ ವಿಸ್ತೀರ್ಣವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿಕೊಳ್ಳಲಾಗಿದೆ. ಇದು ರಾಜ್ಯ ಸರಕಾರಕ್ಕೆ ಗೊತ್ತಿಲ್ಲವೇ? ಈ ಬಗ್ಗೆ ಏಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ದೂರು ನೀಡಲಿಲ್ಲ? ತಮಿಳುನಾಡು ಸರಕಾರ ಕ್ಯಾತೆ ತೆಗೆದಾಕ್ಷಣ ಸರಕಾರ ನೀರು ಹರಿಸಿದೆ. ಈಗ ಸುಪ್ರೀಂ ಕೋರ್ಟ್ ಇನ್ನೂ ಹೆಚ್ಚಿನ ನೀರು ಬಿಡಿ ಎಂದು ಹೇಳಿದರೆ ಸರಕಾರ ನೀರು ಹರಿಸುತ್ತದೆಯೇ ಎಂದು ಅವರು ಕಿಡಿಕಾರಿದರು.

*ಮೇಕೆದಾಟು ಮಕ್ಮಲ್ ಟೋಪಿ:*

ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ನಮ್ಮ ನೀರು, ನಮ್ಮ ಹಕ್ಕು ಎಂದು ಹೇಳಿಕೊಂಡು ಮೇಕೆದಾಟಿನಿಂದ ಪಾದಯಾತ್ರೆ ನಡೆಸಿ ಜನರಿಗೆ ಮಕ್ಮಲ್ ಟೋಪಿ ಹಾಕಿದರು. ಈಗ ನಮ್ಮ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಾ ರಾಜ್ಯದ ಜನರಿಗೆ ವಂಚನೆ ಎಸಗುತ್ತಿದ್ದಾರೆ. ಇದು ಅನ್ಯಾಯದ ಪರಮಾವಧಿ ಎಂದು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

*ಗ್ಯಾರಂಟಿ ಹೆಸರಿನಲ್ಲಿಯೂ ಟೋಪಿ:*

ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದರಲ್ಲಿಯೂ ಕಾಂಗ್ರೆಸ್ ಸರಕಾರ ಜನರಿಗೆ ಟೋಪಿ ಹಾಕಿದೆ. ೨೦೦ ಯುನಿಟ್ ಉಚಿತ ಎಂದವರು ಆಮೇಲೆ ಷರತ್ತುಗಳು ಎಂದರು. ಈಗ ಹೊಸ ಬಿಲ್ಲುಗಳು ಬಂದ ಮೇಲೆ ಜನರು ಔಹಾರುತ್ತಿದ್ದಾರೆ ಎಂದು ಹೇಳಿದ ಅವರು, ಬಹಳಷ್ಟು ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ ಎಂದರು.

ಗ್ಯಾರಂಟಿಗಳ ಹೆಸರಿನಲ್ಲಿ ಮಾಸಿಕ ೪ರಿಂದ ೫ ಸಾವಿರ ರೂಪಾಯಿ ಪ್ರತಿಯೊಬ್ಬರಿಗೂ ಸಿಗುತ್ತದೆ ಎಂದು ಪೊಳ್ಳು ಹೇಳುತ್ತಿದ್ದಾರೆ. ಒಂದು ಕೈಯ್ಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಮತ್ತೊಂದು ಜನರ ಮೇಲೆ ಸಾಲದ ಭಾರವನ್ನು ವಿಪರೀತ ಹೊರೆಸುತ್ತಿದ್ದಾರೆ. ಇದಕ್ಕಾಗಿ ೮೬,೦೦೦ ಕೋಟಿ ರೂ. ಸಾಲ ಮಾಡುತ್ತಿದ್ದಾರೆ. ಈ ಸಾಲವನ್ನು ಯಾರು ತೀರಿಸುತ್ತಾರೆ? ಕಾಂಗ್ರೆಸ್ ಪಕ್ಷದಿಂದ ತೀರಿಸುತ್ತಾರಾ? ಜನರನ್ನು ಸುಲಿಗೆ ಮಾಡಿಯೇ ತೀರಿಸುತ್ತಾರೆ ಎಂದು ಅವರು ಹೇಳಿದರು.

*ಮೈತ್ರಿ ಪ್ರಸ್ತಾಪ ಯಾರಿಂದಲೂ ಬಂದಿಲ್ಲ:*

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಯಾರಿಂದಲೂ ಪ್ರಸ್ತಾಪ ಬಂದಿಲ್ಲ. ನಾವೂ ಪ್ರಸ್ತಾಪ ಇಟ್ಟಿಲ್ಲ. ಹೀಗಿದ್ದ ಮೇಲೆ ಮೈತ್ರಿ ಮಾತೆಲ್ಲಿ ಬಂತು. ನಾವು ನಮ್ಮದೇ ದಾರಿಯಲ್ಲಿ ಹೋರಾಟ ಮಾಡುತ್ತೇವೆ. ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಹೊಸ ಕೋರ್ ಕಮಿಟಿ ರಚನೆ ಮಾಡಿದ್ದೇವೆ. ಸೆಪ್ಟೆಂಬರ್ ೧ರಿಂದ ಈ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಪಕ್ಷವನ್ನು ಕಟ್ಟುತ್ತಾ, ಸಂಘಟನೆಯನ್ನು ಬಲಪಡಿಸಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು, ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್ ರವಿಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Share Post