ಜಮ್ಮು-ಕಾಶ್ಮೀರದಲ್ಲಿ ಹೊಸ ಪಕ್ಷ ಸ್ಥಾಪಿಸ್ತಾರಂತೆ ಗುಲಾಂ ನಬಿ ಆಜಾದ್
ನವದೆಹಲಿ; ಹಿರಿಯ ರಾಜಕಾರಣಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಕಾಂಗ್ರೆಸ್‌ನಿಂದ ನಿರ್ಗಮಿಸಿರುವುದಾಗಿ ಘೋಷಿಸಿದ ಬೆನ್ನಿಗೇ ಅವರು ಪಕ್ಷವೊಂದನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ 5 ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಅವರನ್ನೆಲ್ಲಾ ಸೇರಿಸಿಕೊಂಡು ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟಲು ಗುಲಾಂ ನಬಿ ಆಜಾದ್ ಹೊರಟಿದ್ದಾರೆ.
ಬಿಜೆಪಿಯೊಂದಿಗೆ ಸಂಪರ್ಕದಲ್ಲಿಲ್ಲ. ಆ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆಜಾದ್, ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ನಾಯಕರಾದ ಗುಲಾಂ ಮೊಹಮ್ಮದ್ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಅಕ್ರಂ ಮೊಹಮ್ಮದ್ ಮತ್ತು ಸಲ್ಮಾನ್ ನಿಜಾಮಿ ಅವರು ಗುಲಾಂ ನಬಿ ಆಜಾದ್ ಅವರಿಗೆ ಬೆಂಬಲ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.