Politics

KamalNath; ಹಿರಿಯ ನಾಯಕ ಕಮಲ್‌ ನಾಥ್‌ ಕಾಂಗ್ರೆಸ್‌ಗೆ ಗುಡ್‌ಬೈ..?

ನವದೆಹಲಿ; ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ ಶಾಕ್‌ ಮೇಲೆ ಶಾಕ್‌ ಆಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚವಾಣ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಅದಾದ ಮೇಲೆ ಹಲವರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದರು. ಹೀಗಿರುವಾಗಲೇ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಒಂದು ಕಾಂಗ್ರೆಸ್‌ ನಾಯಕರು ಪಕ್ಷ ಬಿಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದಿಂದ ಒಂದೊಂದೇ ಪಕ್ಷ ಹೊರಹೋಗುತ್ತಿದೆ. ಇದರಿಂದಾಗಿ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಕಟ್ಟಾ ಕಾಂಗ್ರೆಸ್‌ವಾದಿಗಳು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿರುವುದು ಪಕ್ಷವನ್ನು ಉಸಿರುಗಟ್ಟಿಸುವ ವಾತಾವರಣಕ್ಕೆ ತಳ್ಳುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದರು.. ತಕ್ಷಣವೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.. ಮತ್ತೊಬ್ಬ ಮಾಜಿ ಸಿಎಂ ಕಮಲ್ ನಾಥ್ ಕೂಡ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವಂತಿದೆ. ಕಳೆದ ಕೆಲವು ದಿನಗಳಿಂದ ಕಮಲ್ ನಾಥ್ ಅವರು ಕಮಲ ಮುಡಿಯಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.ಇತ್ತೀಚೆಗೆ ಅವರ ಪುತ್ರ ನಕುಲ್ ನಾಥ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಿಂದ ಕಾಂಗ್ರೆಸ್ ಪಕ್ಷ ಎಂಬ ಪದವನ್ನು ತೆಗೆದುಹಾಕಿದ್ದು, ಈ ಅನುಮಾನ ಹುಟ್ಟುಹಾಕಲು ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ಹಾಗೂ ಅವರ ಪುತ್ರ ನಕುಲ್ ನಾಥ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಬಲಗೊಳ್ಳುತ್ತಿವೆ. ಮತ್ತೊಂದೆಡೆ, ಕಮಲ್ ನಾಥ್ ಈಗಾಗಲೇ ದೆಹಲಿ ತಲುಪಿದ್ದು, ಬಿಜೆಪಿಯ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅವರೂ ಮತ್ತು ಅವರ ಮಗನೂ ಪಕ್ಷದಲ್ಲಿ ಭವಿಷ್ಯದ ಬಗ್ಗೆ ಸ್ಪಷ್ಟ ಭರವಸೆ ಸಿಕ್ಕರೆ, ಒಟ್ಟಿಗೆ ಬಿಜೆಪಿ ಸೇರುವ ಸಾಧ್ಯತೆಗಳಿವೆ.

ಕಳೆದ ಕೆಲವು ದಿನಗಳಿಂದ ಕಮಲ್ ನಾಥ್ ಪಕ್ಷ ಬದಲಾಯಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದಾಗ ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿದ್ದರು. ಪಕ್ಷ ಬದಲಿಸುವ ಇರಾದೆ ಇಲ್ಲ ಎಂದು ಅವರು ಹೇಳಿದ್ದರು. ಮತ್ತೊಂದೆಡೆ ಇದೇ ತಿಂಗಳ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಮಲ್ ನಾಥ್ ಅವರು ಮಧ್ಯಪ್ರದೇಶದಿಂದ ಕಾಂಗ್ರೆಸ್ ಪರವಾಗಿ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದ್ರೆ ಅವರಿಗೆ ಟಿಕೆಟ್‌ ನೀಡದೆ ಅಶೋಕ್ ಸಿಂಗ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ರಾಜ್ಯಸಭೆಯಲ್ಲಿ ಅವಕಾಶ ಸಿಗದ ಕಾರಣ ಕಮಲ್ ನಾಥ್ ಬೇಸರಗೊಂಡಿರುವಂತಿದೆ. ಈ ಹಿನ್ನೆಲೆಯಲ್ಲಿಯೇ ಕಮಲ್‌ ನಾಥ್‌ ದೆಹಲಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಅವರ ಮಗನ ಸೋಷಿಯಲ್‌ ಮೀಡಿಯಾದ ಬಯೋದಿಂದ ಕಾಂಗ್ರೆಸ್‌ ಪಕ್ಷವನ್ನು ತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ಬಿಜೆಪಿ ಸೇರೋದು ಮುನ್ಸೂಚನೆ ದಟ್ಟವಾಗಿದೆ.

Share Post