Politics

ಕೊಡಗು-ಮೈಸೂರು ಕ್ಷೇತ್ರಕ್ಕೆ ಯಧುವೀರ್‌ ಬಿಜೆಪಿ ಅಭ್ಯರ್ಥಿಯಾಗ್ತಾರಾ..?

ನವದೆಹಲಿ; ಲೋಕಸಭಾ ಚುನಾವಣೆಗೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ನಾಯಕರು ಎರಡು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ನಿನ್ನೆ ಮಧ್ಯರಾತ್ರಿಯವರೆಗೂ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಎರಡನೇ ಪಟ್ಟಿ ರಿಲೀಸ್‌ ಆಗುವ ಸಾಧ್ಯತೆ ಇದೆ. ಹೀಗಿರುವಾಗಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೊಸ ಹೆಸರು ಕೇಳಿಬರುತ್ತಿದೆ. ಪ್ರತಾಪ ಸಿಂಹ ಅವರಿಗೆ ಬದಲಾಗಿ ರಾಜ ವಂಶಸ್ಥ ಯಧುವೀರ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಕಸರತ್ತು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಪಕ್ಷಕ್ಕೆ ಹಳೇ ಮೈಸೂರು ಭಾಗದಲ್ಲಿ ಅಷ್ಟೊಂದು ಪ್ರಾಬಲ್ಯವಿಲ್ಲ. ಹೀಗಾಗಿ ರಾಜವಂಶಸ್ಥ ಯಧುವೀರ್‌ ಅವರನ್ನು ರಾಜಕೀಯಕ್ಕೆ ಕರೆತಂದರೆ ಪಕ್ಷಕ್ಕೆ ಬಲ ಬರಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರಲ್ಲಿದೆ. ಈ ಕಾರಣಕ್ಕಾಗಿ ಯಧುವೀರ್‌ ಅವರನ್ನು ಕರೆತಂದು ಲೋಕಸಭಾ ಚುನಾವಣೆಗೆ ನಿಲ್ಲಿಸಲು ಚರ್ಚೆಗೂ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಯಧುವೀರ್‌ ಅವರನ್ನು ರಾಜಕೀಯಕ್ಕೆ ಕರೆತರಲು ಕಳೆದ ಚುನಾವಣೆ ಸಮಯದಲ್ಲೇ ಪ್ರಯತ್ನ ಮಾಡಲಾಗಿತ್ತು. ಪ್ರಧಾನಿ ಮೋದಿಯವರು ಕೂಡಾ ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಆದ್ರೆ ಯಧುವೀರ್‌ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ತೋರಿಸಿರಲಿಲ್ಲ. ಇದೀಗ ಮತ್ತೆ ಯಧುವೀರ್‌ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಹಾಲಿ ಸಂಸದ ಪ್ರತಾಪ ಸಿಂಹ ಕೂಡಾ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎರಡು ಬಾರಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಿದ್ದರೂ ಕೂಡಾ ಅವರು, ತಮ್ಮದೇ ಪಕ್ಷದ ಕೆಲ ಶಾಸಕರು ಹಾಗೂ ಮುಖಂಡರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ಜೊತೆಗೆ ಪ್ರತಾಪ ಸಿಂಹ ಅವರು ಈ ಬಾರಿ ಗೆಲ್ಲೋದಕ್ಕೆ ಕಷ್ಟಪಡಬೇಕು ಎಂಬ ಮಾತುಗಳು ಕೇಳಿಬರುತ್ತವೆ. ಈ ಹಿನ್ನೆಲೆಯಲ್ಲಿ ಯಧುವೀರ್‌ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಬಗ್ಗೆ ಬಿಜೆಪಿ ನಾಯಕರು ಚಿಂತನೆ ಮಾಡುತ್ತಿದ್ದಾರೆ.

ಮೈಸೂರು ಸಿಎಂ ಸಿದ್ದರಾಮಯ್ಯ ಅವರ ತವರು.. ಹೀಗಾಗಿ ಮೈಸೂರು ಕ್ಷೇತ್ರ ಗೆಲ್ಲೋದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಹುಡುಕಾಡುತ್ತಿದೆ. ಹೀಗಿರುವಾಗಲೇ ಬಿಜೆಪಿ ಯಧುವೀರ್‌ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಯಧುವೀರ್‌ ಅವರು ರಾಜಕೀಯಕ್ಕೆ ಬಂದರೆ ಪಕ್ಕದ ಕ್ಷೇತ್ರಗಳಾದ ಮಂಡ್ಯ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲೂ ಬಿಜೆಪಿ ಬಲಯುತವಾಗಲು ಅನುಕೂಲವಾಗಲಿದೆ ಅನ್ನೋ ಲೆಕ್ಕಾಚಾರ ಇದೆ. ಹೀಗಾಗಿ ಯಧುವೀರ್‌ಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಆದ್ರೆ ಅವರು ಒಪ್ಪುತ್ತಾರಾ ಅನ್ನೋದೇ ಪ್ರಶ್ನೆ.

 

Share Post