ಎಂಎನ್‌ಎಂ ಪಕ್ಷಕ್ಕೆ ದೇಣಿಗೆ ಕೇಳಿದ ಕಮಲ್ ಹಾಸನ್
ಚೆನೈ : ನಟ ಮತ್ತು ತಮಿಳುನಾಡಿನ ಮಕ್ಕಳ ನಿಧಿ ಮಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಮತ್ತೊಮ್ಮೆ ಸಾರ್ವಜನಿಕರಿಂದ ದೇಣಿಗೆ ಕೇಳಿದ್ದಾರೆ. ರಾಜಕಾರಣದಲ್ಲಿ ಭ್ರಷ್ಟಾಚಾರ ತೊಲಗಿಸಲು ಈ ದೇಣಿಗೆಯ ಪ್ರಸ್ತಾಪವನ್ನು ಕಮಲ್ ಹಾಸನ್ ಮಾಡಿದ್ದಾರೆ.
ಕಮಲ್ ಹಾಸನ್ ಅವರು ನೀಡಿರುವ ಪ್ರಕಟಣೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ಪಕ್ಷಕ್ಕೆ ಸಾರ್ವಜನಿಕರು ದೇಣಿಗೆ ನೀಡುವುದರಿಂದ ಭ್ರಷ್ಟಾಚಾರವನ್ನು ತೊಲಗಿಸಬಹುದು ಎಂದು ನಾನು ನಂಬುತ್ತೇನೆ. ನಾನು ದೇಣಿಗೆ ಒಂದನ್ನೇ ಕೇಳುತ್ತಿಲ್ಲ. ಮುಂದಿನ ಪೀಳಿಗೆಗೆ ಮಾದರಿಯಾದ ಸಮಾಜ ಕಟ್ಟುವ ವಾಗ್ದಾನ ನೀಡಿ ಎಂದು ಕೇಳುತ್ತಿದ್ದೇನೆ ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ.
ಚಿತ್ರರಂಗದವರು ಸೇರಿದಂತೆ ಅನೇಕರು ಈ ಬಗ್ಗೆ ಅಣಕವಾಡಿದ್ದರು ಆದರೆ ನಾನು ಇದನ್ನು ನಂಬುತ್ತೇನೆ ಎಂದು ತಮ್ಮ ನಿರ್ಧಾರದ ಬಗ್ಗೆ ಕಮಲ್ ಹಾಸನ್ ಹೇಳಿಕೊಂಡಿದ್ದಾರೆ. ಈ ಮುಂಚೆಯೂ ಕೂಡ ಕಮಲ್ ಅವರು ತಮ್ಮ ಪಕ್ಷಕ್ಕೆ ದೇಣಿಗೆ ನೀಡಿ ಎಂದು ಕೇಳಿಕೊಂಡಿದ್ದರು ಆದರೆ ನಂತರದ ದಿನಗಳಲ್ಲಿ ಅದನ್ನು ತಡೆ ಹಿಡಿದಿದ್ದರು.