Districts

ಅರಮನೆ ನಗರಿಯಲ್ಲಿ ಒಂಟಿ ಸಲಗದ ಹಾವಳಿ: ವ್ಯಕ್ತಿ ಸಾವು, ಬೆಳೆ ನಾಶ

ಮೈಸೂರು: ಕಾಡಾನೆಗಳ ದಾಳಿ ಹೊಸದೇನಲ್ಲ ಆಹಾರ ಹರಸುತ್ತಾ ನಾಡಿಗೆ ಬರುವ ಕಾಡಾನೆಗಳು ಇನ್ನಿಲ್ಲದ ಹಾನಿ ಉಂಟು ಮಾಡುತ್ತಿವೆ. ಇಂದು ಕೂಡ   ಹಸುಗಳಿಗೆ ಮೇವು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು,  ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಕೊಳವಿಗೆಯಲ್ಲಿ ನಡೆದಿದೆ.

ರೈತ ರಾಜೇಶ್ ಎಂಬುವವರು ಕಳೆದ ರಾತ್ರಿ ಸುಮಾರು 10:30ರ ಸಮಯದಲ್ಲಿ ಹಸುವಿಗೆ ಹಿಂಭಾಗದ ಹಿತ್ತಲಿನಿಂದ ಹುಲ್ಲು ತರಲು ಹೋದಾಗ ಕಾಡಾನೆ ದಾಳಿ ಮಾಡಿದ್ದು, ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಘಟನೆ ಕೂಡ ನಡೆದಿದ್ದು, ಇಂದು ಬೆಳಗಿನ ಜಾವ ವೀರನಹೊಸಹಳ್ಳಿ ವ್ಯಾಪ್ತಿಯ ಕಾಡಂಚಿನ ಗ್ರಾಮ ನಾಗಪುರ ಹಾಡಿಯಲ್ಲಿ ರೈತ ರಾಜು ಎಂಬುವವರ ಮನೆಯ ಮುಂಭಾಗವನ್ನು ಜಖಂ ಮಾಡಿದ್ದು, ಆನೆ ದಾಳಿಗೆ ಮನೆಯೊಳಗಿದ್ದ ಜನ ಭಯಭೀತರಾಗಿದ್ದಾರೆ. ಮನೆ ಧ್ವಂಸ ಮಾಡಿರುವುದರ ಜೊತೆಗೆ  ಜಮೀನಿನಲ್ಲಿ ಬೆಳೆದ ಫಲಸನ್ನು ಸಹ ನಾಶ ಮಾಡಿದೆ. ಮನೆ ಮತ್ತು ಬೆಳೆ ಎರಡನ್ನೂ ಕಳೆದುಕೊಂಡ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ .

ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ಬರದಂತೆ ಗೇಟ್ ಅಳವಡಿಸಿದ್ದರೂ, ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post