NationalPolitics

ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಡನೆಯಾಗಿತ್ತು ಮಹಿಳಾ ಮೀಸಲಾತಿ ಮಸೂದೆ

ನವದೆಹಲಿ; ದೇವೇಗೌಡರು ಪ್ರಧಾನಿಯಾಗಿ ಒಂದು ವರ್ಷವೂ ಪೂರ್ತಿ ಮಾಡಲು ಆಗಲಿಲ್ಲ. ಆದ್ರೆ ಅಧಿಕಾರದಲ್ಲಿದ್ದ ಕಡಿಮೆ ಸಮಯದಲ್ಲೇ ಅವರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಮಾಡಿತ್ತು. ಅದರಲ್ಲಿ ಮಹಿಳಾ ಮೀಸಲಾತಿ ಮಸೂದೆ ಕೂಡಾ ಒಂದು. 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರು. ಈ ವೇಳೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡನೆ ಮಾಡಲಾಗಿತ್ತು. ಆದ್ರೆ ಹಲವಾರು ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗಲಿಲ್ಲ.

ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೂಗು ಈ ಮೊದಲಿನಿಂದಲೂ ಇದೆ ಎಂಬುದಕ್ಕೆ ದೇವೇಗೌಡ ಸರ್ಕಾರದ ಅವಧಿಯಲ್ಲಿ ಮಂಡಿಸಲಾದ ಮಸೂದೆಯೇ ಸಾಕ್ಷಿ. ಅನಂತರವೂ ಈ ಬಗ್ಗೆ ಆಗ್ರಹಗಳು ಕೇಳಿಬಂದವಾದರೂ, ಯಾವ ಸರ್ಕಾರಗಳೂ ಹೆಚ್ಚು ಮಹತ್ವ ನೀಡಲಿಲ್ಲ. ಇನ್ನು 2014 ಹಾಗೂ 2019ರ ಲೋಕಸಭಾ ಚುನಾಣೆಗಳ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ತಾವು ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ಕೊಟ್ಟಿತ್ತು. ಆದ್ರೆ ಕಳೆದ 9 ವರ್ಷಗಳಲ್ಲಿ ಇದು ಆಗಿರಲಿಲ್ಲ. ಇದೀಗ ಕೇಂದ್ರ ಸಂಪುಟ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ವಿಶೇಷ ಅಧಿವೇಶನದಲ್ಲೇ ಈ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ನಮ್ಮಸಂಸತ್ತಿನಲ್ಲಿ ಶೇ.14 ರಷ್ಟು ಮಹಿಳಾ ಸಂಸದರು ಮಾತ್ರ ಇದ್ದಾರೆ. ಹೀಗಾಗಿ, ಮಹಿಳೆಯರಿಗೆ ಪ್ರಾತಿನಿದ್ಯ ನೀಡುವ ಸಲುವಾಗಿ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಮಹಿಳಾ ಮೀಸಲಾತಿ ಇದೆ. ಹೀಗಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮೀಸಲಾತಿ ಬೇಕೆಂದು ಕೂಗು ಇದೆ. ಇದಕ್ಕಾಗಿ ಕೇಂದ್ರ ಸರ್ಕಾರ ಈ ಬಾರಿ ಈ ಮಸೂದೆ ಮಂಡನೆಗೆ ಮುಂದಾಗಿದೆ.

ನಿನ್ನೆ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ದೊರೆತಿದೆ ಎನ್ನಲಾಗಿದೆ. ಈ ಕುರಿತು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್‌ ಮಾಡಿದ್ದರು. ನಂತರ ಅದನ್ನು ಅಳಿಸಿಹಾಕಿದ್ದರು.

ಅಂದಹಾಗೆ, ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್‌ ಸೇರಿ ಹಲವು ಪ್ರತಿಪಕ್ಷಗಳು ಸಭೆ ನಡೆಸಿದ್ದವು. ಈ ವೇಳೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದವು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡಾ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಆಸಕ್ತಿ ತೋರಿಸುತ್ತಿದೆ ಎನ್ನಲಾಗುತ್ತಿದೆ.

 

Share Post