ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ಬಹುಭಾಷಾ ನಟಿ ಗೌತಮಿ
ಚೆನ್ನೈ; ಹಿರಿಯ ನಟಿ ಮತ್ತು ರಾಜಕಾರಣಿ ತಾಡಿಮಲ್ಲ ಗೌತಮಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದಾರೆ. ತನಗೆ ವಂಚಿಸಿದ ವ್ಯಕ್ತಿಗೆ ಪಕ್ಷದ ಮುಖಂಡರು ಸಹಕಾರ ನೀಡುತ್ತಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ.
”ಪಕ್ಷ ಅಥವಾ ಪಕ್ಷದ ನಾಯಕರಿಂದ ನನಗೆ ಯಾವುದೇ ಬೆಂಬಲ ಸಿಗುತ್ತಿಲ್ಲ. ಮೇಲಾಗಿ ಅವರು ನನಗೆ ಮೋಸ ಮಾಡಿದವರ ಪರ ನಿಂತಿದ್ದಾರೆ,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗೌತಮಿ 25 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ರಾಜೀನಾಮೆ ಪತ್ರವನ್ನು ಹಂಚಿಕೊಂಡ ಅವರು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ತಮಿಳುನಾಡು ಬಿಜೆಪಿ ಪಕ್ಷದ ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆಸ್ತಿ ವಿಚಾರದಲ್ಲಿ ವಂಚಿಸಿದ ಸಿ ಅಳಗಪ್ಪನವರಿಗೆ ಪಕ್ಷದ ಕೆಲವರು ಸಹಾಯ ಮಾಡುತ್ತಿದ್ದಾರೆ ಎಂದು ಗೌತಮಿ ಪತ್ರದಲ್ಲಿ ಆರೋಪಿಸಿದ್ದಾರೆ. ಅವರು 20 ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಬಂದರು. ನಾನು ಅವನನ್ನು ತುಂಬಾ ನಂಬಿದ್ದೆ. ನನ್ನ ಆಸ್ತಿಗೆ ಸಂಬಂಧಿಸಿದ ಕಾಗದಗಳನ್ನೂ ಅವನ ಕೈಗೆ ಕೊಟ್ಟೆ. ಆದರೆ, ಆತ ನನಗೆ ಮೋಸ ಮಾಡಿದ,’’ ಎಂದು ಗೌತಮಿ ಪತ್ರದಲ್ಲಿ ಬರೆದಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಮೂಲದ ಗೌತಮಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆ ನಂತರ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿದ್ದರು.