ಪಂಜಾಬ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಣೆಗೆ ಟೆಲಿಪೋಲ್ ಆರಂಭ
ನವದೆಹಲಿ; ಎಎಪಿ ಪಕ್ಷ ಪಂಜಾಬ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಇದಕ್ಕಾಗಿ, ಮೊಬೈಲ್ ಸರ್ವೇ ನಡೆಸಿತ್ತು. ಇದೀಗ ಕಾಂಗ್ರೆಸ್ ಕೂಡಾ ಇದೇ ದಾರಿ ಹಿಡಿದೆ. ಕಾಂಗ್ರೆಸ್ ಪಕ್ಷ ಟೆಲಿಪೋಲ್ ಮೂಲಕ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಿದೆ.
ಎಐಸಿಸಿ ಕಡೆಯಿಂದಲೇ ಪಂಜಾಬ್ ಮತದಾರರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಆಟೋಮ್ಯಾಟಿಕ್ ಕರೆ ಬರಲಿದೆ. ಅದರಲ್ಲಿ ಜನರು ತಮ್ಮ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ಆ ಕರೆಯ ಮಾಹಿತಿ ಈ ಕೆಳಗಿನಂತೆ ಇರುತ್ತದೆ.
ʻಪ್ರಿಯ… ಅವರೇ, ನಾನು ಎಐಸಿಸಿ, ನವದೆಹಲಿ ಪರವಾಗಿ ಮಾತನಾಡುತ್ತಿದ್ದೇನೆ. ನಾವು ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಯಲು ಬಯಸುತ್ತೇವೆ. ನಿಮ್ಮ ಆಯ್ಕೆ ಚರಣ್‌ಜಿತ್ ಸಿಂಗ್ ಚನ್ನಿ ಆಗಿದ್ದರೆ ಒಂದನ್ನು ಒತ್ತಿ, ನಿಮ್ಮ ಆಯ್ಕೆ ನವಜೋತ್ ಸಿಂಗ್ ಸಿಧು ಆದರೆ ಎರಡನ್ನು ಒತ್ತಿ, ಅಭ್ಯರ್ಥಿ ಘೋಷಿಸದೇ ಚುನಾವಣೆ ಎದುರಿಸಿ ಎನ್ನುವುದು ನಿಮ್ಮ ಅನಿಸಿಕೆಯಾದರೆ ಮೂರನ್ನು ಒತ್ತಿʼ
ಹೀಗಂತ ಆಟೋಮ್ಯಾಟಿಕ್ ಕರೆ ಈಗಾಗಲೇ ಬರಲಾರಂಭಿಸಿದೆ. ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಯಾರಿಗೆ ಹೆಚ್ಚು ಒಲವು ತೋರಿಸುತ್ತಾರೋ ಅವರನ್ನು ಚುನಾವಣೆಗೆ ಮುನ್ನವೇ ಅಧಿಕೃತ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿದೆ.