ಮೇಕೆದಾಟು ಪಾದಯಾತ್ರೆ ಹಿನ್ನೆಲೆ; ಬೆಂಗಳೂರು-ಮೈಸೂರು ವಾಹನ ಮಾರ್ಗವೇ ಬದಲು..!
ರಾಮನಗರ: ಜನವರಿ ೯ರಿಂದ ನಡೆಯುತ್ತಿರುವ ಮೇಕದಾಟು ಪಾದಯಾತ್ರೆ ರಾಮನಗರ ಪ್ರವೇಶಿಸಿದೆ. ನಾಳೆಯಿಂದ ಪಾದಯಾತ್ರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಲಿದೆ. ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದರಿಂದ ಈ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮಾರ್ಗವನ್ನು ಬದಲಿಸಲಾಗಿದೆ. ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.
ನಾಳೆಯಿಂದ ವಾಹನಗಳ ಮಾರ್ಗವನ್ನು ಬದಲಿಸಲಾಗಿದೆ. ಮೇಕೆದಾಟು ಪಾದಯಾತ್ರೆ ಬೆಂಗಳೂರು ನಗರ ತಲುಪುವವರೆಗೂ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಯಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಹಾಗೂ ಬೆಂಗಳೂರು ಕಡೆಯಿಂದ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಗೆ ಹೋಗುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಬಂಧ ಹೇರಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಬದಲಾಗಿ ಬೇರೆ ಮಾರ್ಗವನ್ನು ಸೂಚಿಸಲಾಗಿದೆ. ಮೈಸೂರಿನಿಂದ ಬರುವ ವಾಹನಗಳು ಮೈಸೂರು-ಬನ್ನೂರು ಕಿರುಗಾವಲು- ಮಳವಳ್ಳಿ- ಹಲಗೂರು- ಸಾತನೂರು-ಕನಕಪುರ -ಹಾರೋಹಳ್ಳಿ -ಕಗ್ಗಲೀಪುರ- ಬನಶಂಕರಿ- ಸಾರಕ್ಕಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಅಥವಾ ಮೈಸೂರು – ಶ್ರೀರಂಗಪಟ್ಟಣ – ಪಾಂಡವಪುರ- ನಾಗಮಂಗಲ – ಬೆಳ್ಳೂರುಕ್ರಾಸ್ – ಕುಣಿಗಲ್ ನೆಲಮಂಗಲ ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.