Congress Delhi Protest; ಕೇಂದ್ರ ಸರ್ಕಾರ ಚಿನ್ನದ ಮೊಟ್ಟೆ ಇಡುವ ಕೋಳಿ ಕುಯ್ಯುತ್ತಿದೆ; ಸಿದ್ದರಾಮಯ್ಯ
ನವದೆಹಲಿ; ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರದಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಸರ್ಕಾರದ ಎಲ್ಲಾ ಸಚಿವರು, ಕಾಂಗ್ರೆಸ್‌ನ ಸಂಸದರು, ಶಾಸಕರು, ಮುಖಂಡರು ಪಾಲ್ಗೊಂಡಿದ್ದಾರೆ. ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಈ ಪ್ರತಿಭಟನೆ ಮಾಡುತ್ತಿದೆ. ಒಂದು ರಾಜ್ಯ ಸರ್ಕಾರವೇ ಹೋಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು, ವಿಶೇಷ ಎನಿಸಿದೆ. ರಾಜ್ಯದಿಂದ ಹೆಚ್ಚಿನ ತೆರಿಗೆ ಹಣ ಹೋಗುತ್ತಿದ್ದರೂ, ಕೇಂದ್ರ ಸರ್ಕಾರ, ಬೇಕಂತಲೇ ಕರ್ನಾಟಕಕ್ಕೆ ಅನುದಾನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಮೊನ್ನೆ ಮಂಡನೆ ಮಾಡಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆರಳಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಿಎಂ ಸಿದ್ದರಾಮಯ್ಯ ದಾಖಲೆ ಹಾಗೂ ಅಂಕಿ ಅಂಶಗಳ ಸಮೇತ ಕರ್ನಾಟಕಕ್ಕೆ ಹೇಗೆ ಮೋಸವಾಗುತ್ತಿದೆ ಎಂಬುದನ್ನು ವಿವರಿಸುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಕರ್ನಾಟಕದ ಜನರಿಗೆ ಬಿಜೆಪಿ ನಾಯಕರು ದ್ರೋಹ ಮಾಡುತ್ತಿದ್ದಾರೆ. ಚಿನ್ನ ಇಡುವ ಕೋಳಿಯನ್ನೇ ಕೇಂದ್ರ ಸರ್ಕಾರ ಕುಯ್ಯಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
1 ಲಕ್ಷದ 80 ಸಾವಿರದ 787 ಕೋಟಿ ರೂಪಾಯಿ ಅನ್ಯಾಯ
ಪ್ರತಿಭಟನೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದಿಂದ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 1 ಲಕ್ಷದ 80 ಸಾವಿರದ 787 ಕೋಟಿ ರೂಪಾಯಿ ಅನ್ಯಾಯ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಇಷ್ಟೆಲ್ಲಾ ಅನ್ಯಾಯ ಆದರೂ ನಾವು ಪ್ರತಿಭಟನೆ ಮಾಡಬಾರದೇ..? ಪ್ರತಿಭಟನೆ ಮಾಡುವುದು ನಮ್ಮ ಹಕ್ಕಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಹಾಲು ಕೊಡೋ ಹಸುವಿನ ಕೆಚ್ಚಲು ಕತ್ತರಿಸಲು ಹೊರಟ ಕೇಂದ್ರ
ಇಡೀ ದೇಶದಲ್ಲಿ ತೆರಿಗೆ ಹೆಚ್ಚು ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ವರ್ಷ ನಾವು 4 ಲಕ್ಷ 30 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿ ನಾವು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ. ಇಷ್ಟು ದೊಡ್ಡ ಮಟ್ಟದಲ್ಲಿ ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ಹಣ ಹೋಗುತ್ತಿದ್ದರೂ, ನಮಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. 4 ಲಕ್ಷ 30 ಸಾವಿರ ಕೋಟಿ ರೂಪಾಯಿ ಹಣ ರಾಜ್ಯದಿಂದ ಕೇಂದ್ರಕ್ಕೆ ಹೋದರೆ, ನಮಗೆ ಅವರು ವಾಪಸ್ ಕೊಟ್ಟಿರೋದು ಕೇವಲ ಕರ್ನಾಟಕಕ್ಕೆ 50 ಸಾವಿರ ಕೋಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಹೆಚ್ಚು ತೆರಿಗೆ ಕಟ್ಟುತ್ತಿದ್ದೇವೆ. ನಮ್ಮ ರಾಜ್ಯದಿಂದ ಹೆಚ್ಚಿನ ತೆರಿಗೆ ಹೋಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅನುಕೂಲ ಆಗುತ್ತಿದೆ. ಆದ್ರೆ ನಮ್ಮ ಲಾಭ ಪಡೆದ ಕೇಂದ್ರ ಸರ್ಕಾರ, ನಮಗೇ ದ್ರೋಹ ಮಾಡುತ್ತಿದೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕುಯ್ಯಲು ಹೊರಟಿದ್ದಾರೆ. ಹಾಲು ಕೊಡೋ ಹಸುವಿನ ಕೆಚ್ಚಲನ್ನೇ ಕುಯ್ಯುಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ಬಜೆಟ್ ಗಾತ್ರ ಜಾಸ್ತಿಯಾದರೂ ನಮಗೆ ಮಾತ್ರ ಹಣ ಇಲ್ಲ!
2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24 ಲಕ್ಷದ 42 ಸಾವಿರ ಕೋಟಿಯದ್ದಾಗಿತ್ತು. 2023-24ರಲ್ಲಿ 45 ಲಕ್ಷ ಕೋಟಿ ಬಜೆಟ್ ಗಾತ್ರ. ಆಗಲೇ ನಮಗೆ 51 ಸಾವಿರ ಕೋಟಿ ರೂಪಾಯಿ ಅನುದಾನ ಕೊಡುತ್ತಿದ್ದರು. ಆದ್ರೆ ಈ ವರ್ಷ ಬಜೆಟ್ ಗಾತ್ರ ಜಾಸ್ತಿಯಾದರೂ ನಮಗೆ 50252 ಸಾವಿರ ಕೋಟಿ ಕೊಡುತ್ತಿದ್ದಾರೆ. ಇದು ಅನ್ಯಾಯವಲ್ಲದೆ ಇನ್ನೇನು?” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಜನಸಂಖ್ಯೆ ನಿಯಂತ್ರಣ ಮಾಡಿದ್ದು ನಮ್ಮ ತಪ್ಪಾ..?
ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾದಾಗ ಜನಸಂಖ್ಯೆ ನಿಯಂತ್ರಣಕ್ಕೆ ಕರೆ ಕೊಡಲಾಗಿತ್ತು. ಆ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂತು. ಆದ್ರೆ ಉತ್ತರ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲಿಲ್ಲ. ಇದರಿಂದಾಗಿ ಉತ್ತರ ಭಾರತದಲ್ಲಿ ಬಡತನ ಹೆಚ್ಚಿದೆ. ಅಭಿವೃದ್ಧಿಯಾಗಿಲ್ಲ. ಹೀಗಾಗಿ ಅಭಿವೃದ್ಧಿ ಹೊಂದದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ. ಆದ್ರೆ, ನಮಗೆ ಮೋಸ ಮಾಡಿ ಬೇರೆ ರಾಜ್ಯಗಳಿಗೆ ಅನುದಾನ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಉತ್ತರ ಪ್ರದೇಶಕ್ಕೆ 28,3000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದ್ರೆ ಎರಡನೇ ಅತಿಹೆಚ್ಚು ತೆರಿಗೆ ಕೊಡುವ ಕರ್ನಾಟಕಕ್ಕೆ ಕೊಟ್ಟಿರುವುದು ಕೇವಲ 50 ಸಾವಿರ ಕೋಟಿ ರೂಪಾಯಿ. ರಾಜ್ಯದಲ್ಲಿ ನೂರು ರೂಪಾಯಿ ತೆರಿಗೆ ಕೆಲೆಕ್ಟ್ ಮಾಡಿದರೆ ನಮಗೆ ಬರುವುದು 12 ರಿಂದ 13 ರೂಪಾಯಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.