ಸಚಿವ ಸಂಪುಟ; ಕ್ಯಾಬಿನೆಟ್ ದರ್ಜೆ, ಸ್ವತಂತ್ರ ಖಾತೆ ಹಾಗೂ ರಾಜ್ಯ ಖಾತೆಗಳ ನಡುವಿನ ನಡುವಿನ ವ್ಯತ್ಯಾಸವೇನು..?
ಮೊನ್ನೆಯಷ್ಟೇ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.. ಅವರ ಕ್ಯಾಬಿನೆಟ್‌ಗೆ 72 ಮಂದಿಯನ್ನು ಸೇರಿಸಿಕೊಂಡಿದ್ದಾರೆ.. ಇದರಲ್ಲಿ 30 ಸಚಿವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟರೆ, ಐದು ಮಂದಿ ಸಚಿವರಿಗೆ ಸ್ವತಂತ್ರ ಉಸ್ತುವಾರಿ ಹೊಂದಿರುವ ಸಹಾಯಕ ಸಚಿವಗಿರಿ ನೀಡಲಾಗಿದೆ.. ಉಳಿದ 36 ಸಚಿವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ.. ಹಾಗಾದರೆ ಯಾಕೆ ಈ ವಿಂಗಡಣೆ..? ಕ್ಯಾಬಿನೆಟ್ ದರ್ಜೆಯ ಸಚಿವರಿಗೂ, ಸ್ವತಂತ್ರ ಖಾತೆ ಹಾಗೂ ರಾಜ್ಯ ಸಚಿವರಿಗೂ ಇರೋ ವ್ಯತ್ಯಾಸ ಏನು..? ಯಾರ ಕರ್ತವ್ಯ ಏನಾಗಿರುತ್ತದೆ..? ಈ ಬಗ್ಗೆ ತಿಳಿಯೋಣ ಬನ್ನಿ..
ಎಷ್ಟು ಸಂಸದರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬಹುದು..?;
ಕ್ಯಾಬಿನೆಟ್ ದರ್ಜೆ, ಸ್ವತಂತ್ರ ಖಾತೆ ಹಾಗೂ ರಾಜ್ಯ ಖಾತೆಗಳ ನಡುವಿನ ವ್ಯತ್ಯಾಸ ತಿಳಿಯುವ ಮೊದಲು, ಕೇಂದ್ರ ಸಚಿವ ಸಂಪುಟದಲ್ಲಿ ಎಷ್ಟು ಮಂತ್ರಿಗಳಿರಬಹುದು..? ಕಾನೂನಿನಲ್ಲಿ ಎಷ್ಟು ಮಂತ್ರಿಗಳಿಗೆ ಅವಕಾಶ ಇದೆ..? ಎಂಬುದನ್ನು ತಿಳಿಯೋಣ.. ಸದ್ಯದ ಸಂವಿಧಾನದ ನಿಯಮದ ಪ್ರಕಾರ ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಶೇಕಡಾ 15 ರಷ್ಟು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದು.. ಇದರಲ್ಲಿ ಪ್ರಧಾನಮಂತ್ರಿಯೂ ಸೇರುತ್ತಾರೆ.. ಈ ಮೊದಲು ಸಂವಿಧಾನದಲ್ಲಿ ಇಷ್ಟೇ ಮಂದಿಯನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿಯಮ ಇರಲಿಲ್ಲ.. ಆದ್ರೆ, ಸಂವಿಧಾನದ ತಿದ್ದುಪಡಿ ಮಸೂದೆ-2003ರ 91ನೇ ಸಾಂವಿಧಾನಿಕ ತಿದ್ದುಪಡಿಯ ಭಾಗವಾಗಿ 75 ನೇ ವಿಧಿಯನ್ನು ತಿದ್ದುಪಡಿ ಮಾಡಲಾಯಿತು.. ಆಗ ಲೋಕಸಭೆಯ ಒಟ್ಟು ಸದಸ್ಯರಲ್ಲಿ ಶೇಕಡಾ 15 ರಷ್ಟು ಮಂದಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಕಾನೂನು ತರಲಾಯಿತು.. ಅಂದರೆ ಈಗ ಭಾರತದ ಲೋಕಸಭೆಯಲ್ಲಿ 543 ಸದಸ್ಯಬಲವಿದ್ದು, 81 ಸಂಸದರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಅವಕಾಶವಿದೆ.. ಅಂದರೆ ಸದ್ಯ 72 ಮಂದಿ ಮೋದಿ ಮಂತ್ರಿಮಂಡಲ ಸೇರಿದ್ದು, ಇನ್ನೂ 9 ಮಂದಿಗೆ ಮಂತ್ರಿಮಂಡಲ ಸೇರಲು ಅವಕಾಶವಿದೆ..
ಯಾವ ಮಂತ್ರಿಗೆ ಎಷ್ಟು ಅಧಿಕಾರ..?, ಯಾಕೆ ಈ ವಿಂಗಡಣೆ..?;
ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಗಳು, ಸ್ವತಂತ್ರ ಖಾತೆ ಮಂತ್ರಿಗಳು ಹಾಗೂ ರಾಜ್ಯ ಖಾತೆ ಮಂತ್ರಿಗಳು ಇರುತ್ತಾರೆ.. ಇವರಲ್ಲಿ ಯಾರಿಗೆ ಎಷ್ಟು ಅಧಿಕಾರ ಇರುತ್ತದೆ..? ಯಾಕೆ ಹೀಗೆ ವಿಂಗಡಣೆ ಮಾಡಲಾಗಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋ ಪ್ರಯತ್ನ ಮಾಡೋಣ.. ಸಾಮಾನ್ಯವಾಗಿ ಹಿರಿಯರು ಹಾಗೂ ಪ್ರಭಾವಿಗಳಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿರುತ್ತದೆ.. ಅವರಿಗೆ ನಿಯೋಜಿಸಲಾದ ಸಚಿವಾಲಯಗಳಿಗೆ ಅವರು ಮುಖ್ಯಸ್ಥರಾಗಿರುತ್ತಾರೆ. ಸಂಪುಟ ಸಚಿವರ ಮೇಲ್ವಿಚಾರಣೆಯಲ್ಲಿ ಆ ಇಲಾಖೆಯ ಎಲ್ಲಾ ಆಡಳಿತ ವ್ಯವಹಾರಗಳು ನಡೆಯುತ್ತವೆ.. ಇಲಾಖೆಯ ಪ್ರತಿಯೊಂದು ನಿರ್ಧಾರಗಳನ್ನೂ ಅವರೇ ಕೈಗೊಳ್ಳುತ್ತಿರುತ್ತಾರೆ.. ಯಾವುದೇ ಕಡತಗಳಿಗೆ ಸಹಿ ಮಾಡುವ, ಅದನ್ನು ಅಂತಿಮಗೊಳಿಸುವ ಜವಾಬ್ದಾರಿ ಕ್ಯಾಬಿನೆಟ್ ಮಂತ್ರಿಗೆ ಮಾತ್ರ ಇರುತ್ತದೆ..
ಇನ್ನು ಕ್ಯಾಬಿನೆಟ್ ದರ್ಜೆ ಸಚಿವರ ಅಡಿಯಲ್ಲಿ ರಾಜ್ಯ ಖಾತೆ ಅಥವಾ ಸಹಾಯಕ ಮಂತ್ರಿಗಳು ಬರುತ್ತಾರೆ.. ಇವರು ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯಕರಾಗಿರುತ್ತಾರೆ.. ಕೆಲಸದ ವಿಭಜನೆಯ ಭಾಗವಾಗಿ, ಕ್ಯಾಬಿನೆಟ್ ಸಚಿವರು ತಮ್ಮ ಇಲಾಖೆಯ ಅಡಿಯಲ್ಲಿ ಬರುವ ಕೆಲವು ಭಾಗಗಳ ಪ್ರಮುಖ ಜವಾಬ್ದಾರಿಗಳನ್ನು ನಿಯೋಜನೆ ಮಾಡಿರುತ್ತಾರೆ.. ಸಹಾಯಕ ಮಂತ್ರಿಗಳು (MOS) ಕ್ಯಾಬಿನೆಟ್ ಸಚಿವರಿಗೆ ವರದಿ ಮಾಡುತ್ತಾರೆ..
ಇನ್ನು ಸ್ವತಂತ್ರ (ಸ್ವತಂತ್ರ ಉಸ್ತುವಾರಿ) ಸ್ಥಾನಮಾನವನ್ನು ಪಡೆದ ಸಹಾಯಕ ಮಂತ್ರಿಗಳು ತಮ್ಮ ಇಲಾಖೆಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಅಂತಹ ಶಾಖೆಗಳ ವ್ಯಾಪ್ತಿ ಚಿಕ್ಕದಾಗಿರುತ್ತದೆ.. ಆ ಇಲಾಖೆಯ ನಿರ್ವಹಣಾ ನಿರ್ಧಾರಗಳಲ್ಲಿ ಅವರಿಗೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ. ಅವರು ತಮ್ಮ ಇಲಾಖೆಯ ವರದಿಗಳನ್ನು ನೇರವಾಗಿ ಪ್ರಧಾನಿಗೆ ವರದಿ ಮಾಡುತ್ತಾರೆ.
ವಾರಕ್ಕೊಮ್ಮೆ ಸಂಪುಟ ಸಭೆಗಳು ನಡೆಯಲಿದ್ದು, ಇದರಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿರುವ ಸಚಿವರು ಮಾತ್ರ ಪಾಲ್ಗೊಳ್ಳುತ್ತಾರೆ.. ಸ್ವತಂತ್ರ ಖಾತೆ ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದ ಚರ್ಚೆಗಳು ನಡೆಯುವುದಿದ್ದರೆ ಮಾತ್ರ ಸಂಪುಟ ಸಭೆಗೆ ಹೋಗುತ್ತಾರೆ.. ಉಳಿದಂತೆ, ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆದಾಗ ಮಾತ್ರ ಎಲ್ಲರೂ ಸಭೆಯಲ್ಲಿರುತ್ತಾರೆ.. ಇನ್ನು ಕ್ಯಾಬಿನೆಟ್ ಸಚಿವರಿಗೆ ಹೋಲಿಸಿದರೆ ಸೌಲಭ್ಯಗಳು ಭತ್ಯೆಗಳಲ್ಲೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ.. ಇನ್ನು ಸದನದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರು ಇಲ್ಲದ ಸಂದರ್ಭದಲ್ಲಿ ರಾಜ್ಯ ಸಚಿವರು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ..
‘ಕೇಂದ್ರ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ಕಾಯಿದೆ, 1952’ರ ಅಡಿಯಲ್ಲಿ ಕೇಂದ್ರ ಮಂತ್ರಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ನೀಡಲಾಗುತ್ತದೆ.. ಈ ಕಾಯಿದೆಯ ಅಡಿಯಲ್ಲಿ, ಸಂಸದರ ವೇತನ, ಪಿಂಚಣಿ ಮತ್ತು ಭತ್ಯೆಗಳು ಕೇಂದ್ರ ಮಂತ್ರಿಗಳಿಗೂ (ಎಲ್ಲಾ ದರ್ಜೆಯ ಸಚಿವರು) ಅನ್ವಯಿಸುತ್ತವೆ. ಸದ್ಯ ಕೇಂದ್ರ ಸಚಿವರು ಮಾಸಿಕ ವೇತನ ಒಂದು ಲಕ್ಷ ರೂಪಾಯಿ ಇದೆ.. 70 ಸಾವಿರ ರೂಪಾಯಿ ಕ್ಷೇತ್ರ ಭತ್ಯೆ ಹಾಗೂ 60 ಸಾವಿರ ರೂಪಾಯಿ ಕಚೇರಿ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾರೆ. ಸಂಸದೀಯ ವ್ಯವಹಾರಗಳ ಇಲಾಖೆ ಸಂಸದರು ಮತ್ತು ಕೇಂದ್ರ ಸಚಿವರ ವೇತನ ಭತ್ಯೆಗಳನ್ನು ಪರಿಷ್ಕರಿಸುತ್ತದೆ. ಸಂಸದರಿಗೆ ಹೋಲಿಸಿದರೆ, ಕ್ಯಾಬಿನೆಟ್ ಮಂತ್ರಿಗಳಿಗೆ 2,000 ರೂಪಾಯಿ ಮತ್ತು ಸಹಾಯಕ ಸಚಿವರಿಗೆ 1,000 ರೂಪಾಯಿಗಳ ಹೆಚ್ಚುವರಿ ಭತ್ಯೆಯನ್ನು ಕಚೇರಿ ಆತಿಥ್ಯ ವೆಚ್ಚದ ರೂಪದಲ್ಲಿ ನೀಡಲಾಗುತ್ತದೆ.